ಸುದ್ದಿ ಕನ್ನಡ ವಾರ್ತೆ

ಶಿರಸಿ:ನಗರದ ಕಸ್ತೂರಬಾನಗರದಲ್ಲಿ ಆಟವಾಡುತ್ತಾ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಎರಡು ವರ್ಷದ ಬಾಲಕಿಯನ್ನು ಸಕಾಲಕ್ಕೆ ವ್ಯಕ್ತಿಯೊಬ್ಬರು ಧಾವಿಸಿ ಬಂದು ರಕ್ಷಿಸಿದ ಘಟನೆ ನಡೆದಿದೆ.ಇಲ್ಲಿನ ನಿವಾಸಿ ಭುವಿ (2) ಬಾವಿಗೆ ಬಿದ್ದು ಅದೃಷ್ಟವಶಾತ್ ಬದುಕುಳಿದ ಬಾಲಕಿ. ಮನೆಯಲ್ಲಿ ಮಗು ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿಯ ಹತ್ತಿರ ಹೋದಾಗ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ.

ಆತಂಕದೊಂದಿಗೆ ಬಾವಿಯೊಳಗೆ ಇಣುಕಿ ನೋಡಿದಾಗ, ಮಗು ನೀರಿಗೆ ಇಳಿಸಲಾಗಿದ್ದ ಪಂಪ್ ಪೈಪ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತಿರುವುದು ಕಂಡುಬಂದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಹತ್ತಿರದಲ್ಲೇ ವಾಸವಿರುವ ಪಯ್ಯು ಚೌಟಿ ಎಂಬುವವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆ ಸಮಯದಲ್ಲಿ ಬೆಂಗಳೂರಿಗೆ ಹೊರಡುವ ಸಿದ್ಧತೆಯಲ್ಲಿದ್ದ ಅವರು, ಘಟನೆಯ ತೀವ್ರತೆ ಕಂಡು ಕ್ಷಣಾರ್ಧವೂ ತಡಮಾಡದೆ ಬಾವಿಗೆ ಇಳಿಯಲು ಸಿದ್ಧರಾದರು. ಜನರ ಸಹಾಯದೊಂದಿಗೆ ಬಾವಿಗಿಳಿದ ಅವರು, ಸುರಕ್ಷಿತವಾಗಿ ಬಾಲೆಯನ್ನು ಮೇಲಕ್ಕೆತ್ತಿ ತರುವಲ್ಲಿ ಯಶಸ್ವಿಯಾದರು.ಮಗುವನ್ನು ರಕ್ಷಿಸಿದ ಪಯ್ಯು ಚೌಟಿಯವರನ್ನು ಬಾಲಕಿಯ ಅಜ್ಜಿಯು ನಮ್ಮಪಾಲಿನ ದೇವರು ಎಂದು ಕೊಂಡಾಡಿದರು. ಆದರೆ ಪಯ್ಯು ಚೌಟಿಯವರು ಆ ಕ್ಷಣದಲ್ಲಿ ಯಾರೇ ಇದ್ದರೂ ಇದೇ ಕೆಲಸ ಮಾಡುತ್ತಿದ್ದರು ಎಂದು ವಿನಮ್ರವಾಗಿ ಪ್ರತಿಕ್ರಿಯಿಸಿದರು.

ಈ ಘಟನೆ ಸ್ಥಳೀಯರಲ್ಲಿ ಪಯ್ಯು ಚೌಟಿಯವರ ಧೈರ್ಯ ಮತ್ತು ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗುವಂತೆ ಮಾಡಿದೆ. ಘಟನೆಯಿಂದ ಕೆಲಕಾಲ ಈ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ಪಯ್ಯು ಚೌಟಿ ಅವರ ಸಾಹಸವನ್ನು ಶ್ಲಾಘಿಸಿದ್ದಾರೆ.