ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಇಂದಿನ ಜಗತ್ತಿನಲ್ಲಿ ಅಂಕಗಳಿಗಿಂತ ಕೌಶಲ್ಯ ಮತ್ತು ನಾಯಕತ್ವ ಗುಣಕ್ಕೆ ಹೆಚ್ಚಿನ ಮಹತ್ವವಿದೆ. ನಾಯಕತ್ವ ಬೆಳೆಸಿಕೊಂಡವರಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತವೆ. ಹೀಗಾಗಿ ವಿದ್ಯಾರ್ಥಿಗಳು ನಾಯಕರಾಗುವತ್ತ ಗಮನ ಹರಿಸಬೇಕು, ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ವಿಶ್ವದರ್ಶನ ಕೇಂದ್ರೀಯ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಯಶಸ್ಸು ಸಾಧಿಸಲು ಸದಾ ಕಲಿಯುವ ಮನೋಭಾವ ಇರಬೇಕು ಎಂದರು. ನೀವು ಇಂದು ಜೀವನದ ಒಂದು ಹಂತವನ್ನು ದಾಟಿ ಮುಂದಿನ ಹಂತಕ್ಕೆ ಹೋಗುತ್ತಿದ್ದೀರಿ. ಇದು ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ನಿರಂತರ ಕಲಿಕೆಯಿಂದ ಯಶಸ್ಸು ಸಾಧ್ಯ. ಜೀವನದಲ್ಲಿ ಆತ್ಮಸಂತೋಷವೂ ಅಷ್ಟೇ ಪ್ರಮುಖವಾಗಿದೆ. ನಿಮ್ಮ ಯಶಸ್ಸಿನ ಮೂಲಕ ಸ್ವತಂತ್ರವಾಗಿ ಬದುಕಿ, ಪಾಲಕರಿಗೆ ಹೆಮ್ಮೆ ತರುವಂತಾಗಬೇಕು, ಎಂದು ಅವರು ಕಿವಿಮಾತು ಹೇಳಿದರು.
ಶಿಕ್ಷಣ ಸಮೂಹದ ನಿರ್ದೇಶಕ ಸಿ.ಎ. ವಿಶ್ಲೇಶ್ವರ ಗಾಂವ್ಕರ ಮಾತನಾಡಿ, ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರವಿರುತ್ತದೆ. ಅದನ್ನು ಎದುರಿಸಿ ಧೈರ್ಯವಾಗಿ ಮುನ್ನಡೆಯಬೇಕು. ಈ ಹಂತದವರೆಗೆ ನಮ್ಮ ಜೀವನಕ್ಕೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಳ್ಳಬೇಕು, ಎಂದರು. ಕಾರ್ಯಕ್ರಮದಲ್ಲಿ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್, ಉಪಪ್ರಾಂಶುಪಾಲೆ ಆಸ್ಮಾ ಶೇಖ್, ಶಿಕ್ಷಕರು ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಶಾಲಾ ದಿನಗಳ ನೆನಪಿಗಾಗಿ ಸಿದ್ಧಪಡಿಸಿದ ವಿಡಿಯೋ ಪ್ರದರ್ಶನ ಗಮನ ಸೆಳೆಯಿತು. ವಿದ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ತಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
