ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ (ಟಿ.ಎಂ.ಎಸ್.) ಅಸ್ತಿತ್ವವನ್ನು ಉಳಿಸಬೇಕು ಮತ್ತು ಹಾಲಿ ಆಡಳಿತಾಧಿಕಾರಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ‘ಟಿ.ಎಂ.ಎಸ್. ಉಳಿಸಿ ಹೋರಾಟ ಸಮಿತಿ’ ಹಮ್ಮಿಕೊಂಡಿರುವ ಸಹಕಾರ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನೂರಾರು ರೈತರು ಮತ್ತು ಸದಸ್ಯರು ಬಿರುಬಿಸಿಲನ್ನು ಲೆಕ್ಕಿಸದೇ ರಸ್ತೆ ಮಧ್ಯದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಕೆಲಕಾಲ ವ್ಯತ್ಯಯಗೊಂಡಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಟಿ.ಎಂ.ಎಸ್. ಮಾಜಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸಂಸ್ಥೆಯ ಅಸ್ತಿತ್ವವನ್ನೇ ಅಳಿಸಲು ಹಿಂಬಾಗಿಲಿನಿಂದ ರಾಜಕೀಯ ಹುನ್ನಾರ ನಡೆಸಲಾಗುತ್ತಿದೆ. ನ್ಯಾಯಾಲಯದಲ್ಲಿ ನಮಗೆ ಜಯ ಸಿಗುವ ಆತಂಕದಿಂದ ಆಡಳಿತಾಧಿಕಾರಿ ಮೂಲಕ ಸಂಸ್ಥೆಗೆ ಮಾರಕವಾಗುವ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಸಂಸ್ಥೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಹಾಗೂ ಮಾಜಿ ನಿರ್ದೇಶಕ ವೆಂಕಟರಮಣ ಬೆಳ್ಳಿ ಅವರು ಮಾತನಾಡಿ, ಶಾಸಕ ಶಿವರಾಮ ಹೆಬ್ಬಾರ್ ಅವರ ತಂಡ ಮತ್ತು ಸಂಸ್ಥೆಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಹೆಗಡೆ ಅವರ ರಾಜಕೀಯ ಹಸ್ತಕ್ಷೇಪವೇ ಈ ಅವ್ಯವಸ್ಥೆಗೆ ಕಾರಣ ಎಂದು ನೇರವಾಗಿ ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಚಂದ್ರಶೇಖರ ಹೊಸಮನಿ ಮತ್ತು ಸಹಕಾರಿ ಇಲಾಖೆಯ ಜಿಲ್ಲಾ ಉಪನಿಬಂಧಕರು ಅಹವಾಲು ಸ್ವೀಕರಿಸಿದರು. ಆಡಳಿತಾಧಿಕಾರಿ ವಜಾ ಮಾಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಯತ್ನಿಸಿದಾಗ, ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಮಗೂ ನಿಯಮಗಳ ಅರಿವಿದೆ. ನಮ್ಮನ್ನು ದಾರಿ ತಪ್ಪಿಸಬೇಡಿ ಎಂದು ಪಟ್ಟು ಹಿಡಿದರು.
ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು, ಗುರುವಾರ ಸಂಜೆಯೊಳಗೆ ಆಡಳಿತಾಧಿಕಾರಿಯನ್ನು ಬದಲಾವಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಕಾರ್ಯಕ್ರಮವನ್ನು ವೆಂಕಟರಮಣ ಭಟ್ಟ ಕಿರಕುಂಭತ್ತಿ ನಿರೂಪಿಸಿದರು. ಪ್ರತಿಭಟನೆಯಲ್ಲಿ ಪ್ರಮೋದ ಹೆಗಡೆ, ರಾಘವೇಂದ ಭಟ್ಟ, ಸುಬ್ಬಣ್ಣ ಬೋಳ್ಳನೆ, ನರಸಿಂಹ ಭಟ್ಟ, ಗೋಪಾಲಕೃಷ್ಣ ಗಾಂವ್ಕರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
