ಸುದ್ದಿ ಕನ್ನಡ ವಾರ್ತೆ

ಬೆಳಗಾವಿ: ನಗರದ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಹನಿ ಟ್ರ್ಯಾಪ್ ನಡೆಸುತ್ತಿದ್ದ ಮಹಿಳೆಯನ್ನು ಟಿಳಕವಾಡಿ ಪೊಲೀಸರು ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ಫ್ಯಾಶನ್ ಡಿಸೈನರ್ ದೀಪಾ ಅವಟಗಿ (33) ಬಂಧಿತ ಆರೋಪಿಯಾಗಿದ್ದು, ಆಕೆಯ ಸಹಚರ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಹುಕ್ಕೇರಿ ತಾಲೂಕಿನ ನಿವಾಸಿಯಾದ ಶಿವಾನಂದ ಮಠಪತಿ ನಗರದಲ್ಲಿನ ಶ್ರೀಮಂತ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ದೀಪಾಗೆ ಒದಗಿಸುತ್ತಿದ್ದನು. ಈ ಮಾಹಿತಿಯನ್ನು ಆಧರಿಸಿಕೊಂಡು ದೀಪಾ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಮೂಲಕ ಪರಿಚಯ ಬೆಳೆಸಿ, ಆಕರ್ಷಕ ಮಾತುಕತೆ ಮೂಲಕ ಅವರನ್ನು ತನ್ನ ಬಲೆಗೆ ಬೀಳಿಸುತ್ತಿದ್ದಳು.

ಪರಿಚಯ ಗಾಢವಾದ ಬಳಿಕ ಅಶ್ಲೀಲ ಚಾಟ್ ನಡೆಸಿ, ನಂತರ ಬೆಳಗಾವಿಯ ಲಾಡ್ಜ್‌ಗೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದಳು. ಲಾಡ್ಜ್‌ಗೆ ಬಂದ ವ್ಯಕ್ತಿಗೆ ಮೊದಲು ಸ್ನಾನ ಮಾಡಿ ಬರಲು ಹೇಳಿ, ಆತ ಬಾತ್‌ರೂಮ್‌ಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲು ಲಾಕ್ ಮಾಡಿ, ಆತನ ಮೊಬೈಲ್ ಫೋನ್‌, ಹಣ ಹಾಗೂ ಕಾರಿನ ಕೀಲಿಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದಳು.
ನಂತರ ಬಾತ್‌ರೂಮ್‌ನಲ್ಲಿ ಸಿಲುಕಿದ್ದ ವ್ಯಕ್ತಿಗೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಪೊಲೀಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂಬ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಸಿಸಿಟಿವಿಯಿಂದ ಬಯಲಾದ ಜಾಲ
ಲಾಡ್ಜ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಆರೋಪಿಯ ಕೃತ್ಯಗಳು ಬಯಲಾಗಿದ್ದು, ಟಿಳಕವಾಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದೀಪಾ ಅವಟಗಿಯನ್ನು ಬಂಧಿಸಿದೆ. ಬಳಿಕ ನ್ಯಾಯಾಲಯದ ಅನುಮತಿಯೊಂದಿಗೆ ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಲಕ್ಷಾಂತರ ಮೌಲ್ಯದ ವಸ್ತು ಜಪ್ತಿ
ಬಂಧಿತ ಆರೋಪಿಯಿಂದ ಪೊಲೀಸರು ಒಟ್ಟು ₹32 ಲಕ್ಷ 86 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ ಒಂದು ಫಾರ್ಚುನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ ₹14 ಸಾವಿರ ನಗದು ಸೇರಿವೆ.
ಈ ಪ್ರಕರಣದಲ್ಲಿ ಪರಾರಿಯಾಗಿರುವ ಶಿವಾನಂದ ಮಠಪತಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಇನ್ನೂ ಕೆಲವರು ಇದೇ ಜಾಲಕ್ಕೆ ಬಲಿಯಾಗಿರುವ ಸಾಧ್ಯತೆ ಇದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.