ಸುದ್ಧಿಕನ್ನಡ ವಾರ್ತೆ
Goa: ಗೋವಾದ ತಿಸ್ಕ-ಉಜಗಾಂವನಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ಬುಧವಾರ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಸಂತೋಷ ಗಾವಕರ್ (11) ಎಂಬ ಬಾಲಕನ ಮೃತದೇಹ ದೂಧಸಾಗರ ನದಿಯಲ್ಲಿ ಗುರುವಾರ ಪತ್ತೆಯಾಗಿದೆ. (The dead body of the boy was found in Dudhasagar river on Thursday).  ಅಗ್ನಿಶಾಮಕ ದಳದ ಅಧಿಕಾರಿ ಸುಶೀಲ್ ಮೋರಜಕರ್ ರವರು ತಮ್ಮ ತಂಡದೊಂದಿಗೆ ದೂಧಸಾಗರ ನದಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

ಬುಧವಾರ ಸಂಜೆ ಬಾಲಕ ಸಂತೋಷ ತನ್ನ ಸ್ನೇಹಿತರೊಂದಿಗೆ ಟ್ಯೂಶನ್ ಗೆ ಹೋಗಿದ್ದ. ಆದರೆ ಟ್ಯೂಶನ್ ಮುಗಿಸಿ ಬರುವಷ್ಟರಲ್ಲಿ ಭಾರಿ ಮಳೆಗೆ ದಾರಿ ಮಧ್ಯದಲ್ಲಿ ನಾಲೆ ಉಕ್ಕಿ ಹರಿಯುತ್ತಿತ್ತು. ಸ್ನೇಹಿತರೆಲ್ಲ ಒಬ್ಬರ ಕೈ ಮತ್ತೊಬ್ಬರು ಹಿಡಿದು ನೀರು ದಾಟುತ್ತಿದ್ದಾಗ ಈ ಬಾಲಕ ಕೈ ತಪ್ಪಿ ನೀರಲ್ಲಿ ಕೊಚ್ಚಿ ಹೋಗಿದ್ದ. ಕೂಡಲೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಆಗಮಿಸಿ ಬಾಲಕನಿಗಾಗಿ ಶೋಧ ಕಾರ್ಯ ಕೈಗೆತ್ತಿಕೊಂಡಿದ್ದರು. ತಡ ರಾತ್ರಿಯ ವರೆಗೂ ಶೋಧ ಕಾರ್ಯ ಕೈಗೊಂಡರೂ ಬಾಲಕ ಪತ್ತೆಯಾಗಿರಲಿಲ್ಲ. ಗುರುವಾರ ಸಮೀಪವೇ ಇದ್ದ ದೂಧಸಾಗರ ನದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ನದಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಪೊಂಡಾ ಪೋಲಿಸರು ಆಗಮಿಸಿ ಪಂಚನಾಮೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಡಗಾಂವ ಹೊಸ್ಪಿಸಿಯೊ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೋಲಿಸ್ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.