ಸುದ್ದಿ ಕನ್ನಡ ವಾರ್ತೆ
ಕಾರವಾರ: ಮಳೆಗಾಲದಲ್ಲಿ ಮಾರ್ಗ ಮಧ್ಯದಲ್ಲಿ ಭೂಕುಸಿತದ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಕಾರವಾರ ಸುಳಗೇರಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮಳೆಗಾಲ ಮುಗಿದು ನಾಲ್ಕು ತಿಂಗಳಾದರೂ ಸದ್ರಿ ಬಸ್ ಸೇವೆಯನ್ನು ಪುನಃ ಪ್ರಾರಂಭಿಸದೇ ಇರುವುದರಿಂದ ಶಾಲಾ ಕಾಲೇಜುಗಳಿಗೆ ಆಗುತ್ತಿರುವ ತೊಂದರೆ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಶಾಸಕ ಸತೀಶ್ ಸೈಲ್ ರವರ ಗಮನಕ್ಕೆ ತಂದರೂ ತಾಂತ್ರಿಕ ಕಾರಣದಿಂದ ಬಸ್ ಸೇವೆಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ಡಿಪೋ ಮ್ಯಾನೇಜರ್ ರವರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು. ಶಾಸಕರಾದ ಸತೀಶ ಸೈಲ್ ರವರು ಸದ್ರಿ ಮಾರ್ಗದಲ್ಲಿ ಕೆಪಿಸಿಯವರ ಬಸ್ ಸಂಚಾರ ಮತ್ತು ಇತರೇ ವಾಹನಗಳ ಸಂಚಾರ ಇರುವುದರಿಂದ ಸದ್ರಿ ಬಸ್ ಸೇವೆಯನ್ನು ತಕ್ಷಣದಿಂದಲೇ ಪ್ರಾರಂಭಿಸಲು ಡಿಪೋ ಮ್ಯಾನೇಜರ್ ರವರಿಗೆ ಸೂಚನೆ ನೀಡಿದರು ಮತ್ತು ಈ ಕುರಿತು ವಿಭಾಗೀಯ ನಿಯಂತ್ರಕರು, ಜಿಲ್ಲಾಧಿಕಾರಿ ಮತ್ತು ನಿನ್ನೆ ನಡೆದ ಪತ್ರಿಕಾಗೋಷ್ಠಿಯ ಸಮಯದಲ್ಲಿ ಇಲಾಖೆಯ ಎಂ.ಡಿ. ಯವರಿಗೂ ಸದ್ರಿ ವಿಷಯವನ್ನು ಅವರ ಗಮನಕ್ಕೆ ತಂದಿದ್ದರು. ಫಲವಾಗಿ ಕಾರವಾರ ಸುಳಗೇರಿ ಬಸ್ ಇಂದು ಸಂಜೆ 5:45ಕ್ಕೆ ಕಾರವಾರ ಬಸ್ ನಿಲ್ದಾಣದಿಂದ ಹೊರಡಲಿದೆ ಮತ್ತು ಸುಳಗೇರಿಯಲ್ಲಿ ತಂಗಿ ಮರುದಿನ ಬೆಳಿಗ್ಗೆ 6:00 ಗಂಟೆಗೆ ಸುಳಗೇರಿಯಿಂದ ಕಾರವಾರಕ್ಕೆ ಬಿಡಲಾಗುವುದು ಎಂದು ಶಾಸಕ ಸತೀಶ್ ಸೈಲ್ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ ಮತ್ತು ಈ ಸಂದರ್ಭದಲ್ಲಿ ನಿನ್ನೆಯಷ್ಟೇ ಹಸಿರು ನಿಶಾನೆ ತೋರಿದ ಕಾರವಾರ ಬೆಂಗಳೂರು ಪಲ್ಲಕ್ಕಿ (ನಾನ್ ಎಸಿ ಸ್ಲೀಪರ್ ) ಬಸ್ ಸೇವೆಯು ನಾಳೆಯಿಂದ ಸಂಜೆ 7: 30ಕ್ಕೆ ಪ್ರಾರಂಭವಾಗಲಿದ್ದು ಸದ್ರಿ ಬಸ್ ಸೇವೆಯ ಉಪಯೋಗವನ್ನು ಸಹ ಸಾರ್ವಜನಿಕರು ಪಡೆದು ಕೊಳ್ಳಬೇಕು ಎಂದು ಶಾಸಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ
