ಸುದ್ದಿ ಕನ್ನಡ ವಾರ್ತೆ
ಭಟ್ಕಳ:ಪಟ್ಟಣದಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧ ಭೀತಿಯಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬೆನ್ನಲ್ಲೇ, ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಗೆ ವಾಹನ ಸವಾರರು ಮುಗಿಬಿದ್ದಿದ್ದಾರೆ. ಮಂಗಳವಾರ ಪಟ್ಟಣದ ಹೆದ್ದಾರಿ ಬದಿಯ ಕಾಮಾಕ್ಷಿ ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧೆಡೆ ಇಂಧನಕ್ಕಾಗಿ ಜನರು ದೀರ್ಘ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು.
ಗಲ್ಫ್ ರಾಷ್ಟ್ರಗಳಿಂದ ತೈಲ ಆಮದು ಸ್ಥಗಿತಗೊಳ್ಳಬಹುದು ಎಂಬ ಅಪ್ರಮಾಣಿತ ಸುದ್ದಿಯಿಂದ ಆತಂಕಗೊಂಡ ಕೆಲವರು ಕ್ಯಾನ್‌ಗಳಲ್ಲಿಯೂ ಇಂಧನ ಸಂಗ್ರಹಿಸಲು ಮುಂದಾಗಿದ್ದಾರೆ. ಆದರೆ, ತೈಲ ಕಂಪನಿಗಳಿಂದ ಇಂಧನ ಕೊರತೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಪೆಟ್ರೋಲ್ ಬಂಕ್ ನಿರ್ವಾಹಕರು ಮನವಿ ಮಾಡಿದ್ದಾರೆ. ಘಟಕಗಳಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದೆ, ಸದ್ಯಕ್ಕೆ ಯಾವುದೇ ಆತಂಕ ಅಗತ್ಯವಿಲ್ಲ ಎಂಬ ಮಾಹಿತಿ ಹೊರಬಿದ್ದಿತ್ತು. ಆದಾಗ್ಯೂ, ಯುದ್ಧದ ವ್ಯಾಪ್ತಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಮತ್ತೆ ಭೀತಿ ಮೂಡಿದೆ.
ಭಟ್ಕಳ ಸೇರಿದಂತೆ ಹಲವೆಡೆ ಪೆಟ್ರೋಲ್ ಬಂಕ್‌ಗಳ ಮುಂದೆ ಜನರು ಆತಂಕದಿಂದ ಇಂಧನ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅಧಿಕಾರಿಗಳು ಸದ್ಯಕ್ಕೆ ಯಾವುದೇ ತಕ್ಷಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನರು ವದಂತಿಗಳಿಗೆ ಕಿವಿಗೊಡದೇ, ಅಧಿಕೃತ ಮಾಹಿತಿಯನ್ನೇ ನಂಬಿ ಶಾಂತವಾಗಿರಬೇಕೆಂದು ಮನವಿ ಮಾಡಲಾಗಿದೆ. ಒಟ್ಟಾರೆ, ಮಧ್ಯಪ್ರಾಚ್ಯದ ಯುದ್ಧಾತಂಕ ಜಾಗತಿಕ ಇಂಧನ ಮಾರುಕಟ್ಟೆಯನ್ನು ಕದಡಿದ್ದು, ಅದರ ಪರಿಣಾಮ ಭಾರತದಲ್ಲಿಯೂ ಕಂಡುಬರುವ ಸಾಧ್ಯತೆ ಇದೆ. ಆದರೆ ಸರ್ಕಾರದ ಮುನ್ನೆಚ್ಚರಿಕಾ ಕ್ರಮಗಳಿಂದ ತಕ್ಷಣದ ಅಭಾವ ಉಂಟಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
