ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಯರೆ ಶ್ರೀ ಗೌಳಾದೇವಿಯ ಜಾತ್ರೋತ್ಸವದ ಎರಡು ದಿನದ ಕಾರ್ಯಕ್ರಮಗಳು ಶೃದ್ಧಾ ಭಕ್ತಿಯಿಂದ ನಡೆದು ಯಶಸ್ವಿಯಾಗಿ ಸಂಪನ್ನಗೊಂಡಿತು.
ತಾಲೂಕಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶ್ರೀ ಗೌಳಾದೇವಿಯ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ತಾಲೂಕಿನ ಭಕ್ತರಲ್ಲದೇ ನೆರೆಯ ಗೋವಾ,ಮಹಾರಾಷ್ಟ್ರ ರಾಜ್ಯದ ಇನ್ನೂ ಅನೇಕ ಕಡೆಗಳಿಂದ ಭಕ್ತರು ಆಗಮಿಸಿ ವಿವಿಧ ರೀತಿಯ ಶ್ರೀ ದೇವಿಗೆ ಸೇವೆಗಳನ್ನು ಸಲ್ಲಿಸಿದರು. ಫೆ.28 ರ ಶನಿವಾರ ಶ್ರೀ ದೇವಿಯ ಪೂಜಾ ಕಾರ್ಯಕ್ರಮ, ಜ್ಞಾನೇಶ್ವರಿಯ ಅಧ್ಯಾಯದ ವಾಚನ.ಭಜನ ಗಾಥಾ, ಹರಿಪಾಠ,ಕೀರ್ತನೆಗಳು ನಡೆದವು. ಮಾರ್ಚ 01ರಂದು ಪೂಜಾ ಕಾರ್ಯಕ್ರಮ,ಶ್ರೀ ದೇವಿಗೆ ಸೀರೆ ಉಡಿಸುವುದು,ತೀರ್ಥ ಪ್ರಸಾದ ವಿತರಣೆ.ಮಧ್ಯಾಹ್ನದಿಂದ ಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ,ಸವಾಲ್ ಕಾರ್ಯಕ್ರಮ,ದೇಣಿಗೆ ಕೂಪನ್ ಡ್ರಾ,ಜಂಗಾಲಚ್ ರಾಜಾ ಮರಾಠಿ ನಾಟಕದ ಪ್ರದರ್ಶನ ನಡೆಯಿತು. ಜಾತ್ರೆಯಲ್ಲಿ ವಿವಿಧ ರೀತಿಯ ತಿಂಡಿತಿನಿಸಿನ,ಮಿಠಾಯಿಗಳ, ತಂಪು ಪಾನೀಯ, ಪಾತ್ರೆ,ಬಟ್ಟೆ, ದಿನಬಳಕೆ ವಸ್ತುಗಳ, ಪೂಜಾ ಸಾಮಗ್ರಿಗಳ,ಮಹಿಳೆಯರ ಅಲಂಕಾರಿಕ ವಸ್ತುಗಳ,ಮಕ್ಕಳ ಆಟಿಕೆಗಳ ಇನ್ನಿತರ ವಸ್ತುಗಳ ಹೆಚ್ಚಿನ ಸಂಖ್ಯೆಯ ವ್ಯಾಪಾರ ಮಳಿಗೆಯಲ್ಲಿ ಜೋರಾದ ವ್ಯಾಪಾರ ನಡೆಯಿತು.
ಗೌಳಾದೇವಿಯ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದ ಗಣ್ಯರು,ನಿಕಟಪೂರ್ವ ಗ್ರಾಮ ಪಂಚಾಯತ ಪ್ರತಿನಿಧಿಗಳು, ಅರಣ್ಯ ಇಲಾಖೆಯ ಅಧಿಕಾರಿ,ಸಿಬ್ಬಂದಿ ವರ್ಗ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿ ವರ್ಗ,ಮಾಧ್ಯಮದ ಬಳಗದವರು ಹುತ್ತದ ದೇವತೆ ಶ್ರೀ ಗೌಳಾದೇವಿಯ ದರ್ಶನ ಪಡೆದರು. ಶ್ರೀ ಗೌಳಾದೇವಿಯ ದೇವಸ್ಥಾನ ಸಮಿತಿಯವರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸಹಕಾರ ನೀಡಿದ ಗಣ್ಯರನ್ನು,ಅಧಿಕಾರಿ ವರ್ಗದವರನ್ನು,ಮಾಧ್ಯಮದ ಮಿತ್ರರನ್ನು ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮವನ್ನುಸಮಿತಿಯ ಕಾರ್ಯದರ್ಶಿಗಳಾದ ಮಹಾದೇವ ಮಿರಾಶಿಯವರು ನಡೆಸಿಕೊಟ್ಟರು. ಶ್ರೀ ಗೌಳಾದೇವಿಯ ಪಂಚ ಮಿರಾಶಿಗಳ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಬುಡಕಟ್ಟು ಕುಣಬಿ ಜನಾಂಗದ ಪದ್ಧತಿಯಲ್ಲಿ ಯಶಸ್ವಿಯಾಗಿ ನಡೆಯಿತು.ಊರಿನ, ಪರ ಊರಿನ ಗ್ರಾಮಸ್ಥರು ಜಾತ್ರೆಯ ಯಶಸ್ಸಿಗೆ ಸಹಕಾರ ನೀಡಿದರು.
