ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ ದಕ್ಷಿಣ ಭಾರತದ ಸುಪ್ರಸಿದ್ಧ ಶ್ರೀ ಮಾರಿಕಾಂಬೆ ದೇವಿಯ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಅಪಾರ ಜನಸಮೂಹವೆ ಹರಿದು ಬಂದಿತು.
ವಿಶೇಷವಾಗಿ ಶ್ರೀ ದೇವಿಯ ಅತ್ಯಂತ ಪ್ರಿಯ ದಿನವೆಂದು ಪರಿಗಣಿಸಲ್ಪಡುವ ಶುಕ್ರವಾರದಂದು ಜಾತ್ರಾ ಮಹೋತ್ಸವದಲ್ಲಿ ಭಕ್ತರ ಅಸಂಖ್ಯ ಸಮೂಹವೇ ಹರಿದುಬಂದಿದೆ. ಮುಂಜಾನೆಯಿಂದಲೇ ಜಾತ್ರಾ ಚಪ್ಪರದತ್ತ ಆಗಮಿಸಿದ ಸಾರ್ವಜನಿಕರು ದೇವಿಯ ದರ್ಶನ ಪಡೆದು ವಿವಿಧ ಧಾರ್ಮಿಕ ಸೇವೆಗಳನ್ನು ಸಲ್ಲಿಸುವ ಮೂಲಕ ಭಕ್ತಿಭಾವದಲ್ಲಿ ತೊಡಗಿದರು.
ಬೆಳಿಗ್ಗೆಯಿಂದಲೇ ಸುಮಾರು ಉದ್ದದವರೆಗೆ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು. ಮಧ್ಯಾಹ್ನವಾಗುತ್ತಿದ್ದಂತೆ ಈ ಸರದಿ ಇನ್ನಷ್ಟು ವಿಸ್ತರಿಸಿತು. ಮಾರಿಕಾಂಬೆಗೆ ‘ಉಡಿ’ ಅರ್ಪಿಸುವುದು ಅತ್ಯಂತ ಶ್ರೇಷ್ಠ ಎಂಬ ನಂಬಿಕೆ ಇರುವುದರಿಂದ ಉಡಿ ಸಲ್ಲಿಸಲು ಭಾರೀ ಜನದಟ್ಟಣೆ ಕಂಡುಬಂದಿತು. ದೇವಾಲಯದ ಸಿಬ್ಬಂದಿ ಗದ್ದುಗೆಯ ಆವರಣದಲ್ಲಿ ನಿರಂತರವಾಗಿ ಉಡಿ ಸಿದ್ಧಪಡಿಸುತ್ತಿದ್ದು, ಕೇವಲ ಎರಡು ದಿನಗಳಲ್ಲಿ ಲಕ್ಷಾಂತರ ಉಡಿಗಳು ವಿತರಿಸಲ್ಪಟ್ಟಿವೆ. ಕೆಲವರು ಮನೆಯಿಂದಲೇ ಉಡಿ ತಯಾರಿಸಿಕೊಂಡು ಬ೦ದರೆ, ಇನ್ನು ಕೆಲವರು ಸ್ಥಳೀಯ ಅಂಗಡಿಗಳಲ್ಲಿ ಖರೀದಿಸಿ ಸಮರ್ಪಿಸಿದರು.
ದರ್ಶನದ ಜೊತೆಗೆ ತುಲಾಭಾರ, ಬೇವಿನ ಉಡುಗೆ, ಉದ್ದಂಡ ನಮಸ್ಕಾರ ಮುಂತಾದ ಹರಕೆ ಸೇವೆಗಳನ್ನು ಸಲ್ಲಿಸುವವರ ಸಂಖ್ಯೆಯೂ ಗಮನಾರ್ಹವಾಗಿತ್ತು. ಜಾತ್ರಾ ಚಪ್ಪರದ ಮುಂಭಾಗದಲ್ಲಿ ದೇವಿಗೆ ಅರ್ಪಿತವಾದ ಸೀರೆಗಳ ಹರಾಜು ನಿರಂತರವಾಗಿ ನಡೆಯುತ್ತಿದ್ದು, ಮಹಿಳಾ ಭಕ್ತರು ಮುಗಿಬಿದ್ದು ಖರೀದಿಸಿದರು. ಸೀರೆಗಳ ಜೊತೆಗೆ ಹಣ್ಣು-ಹಂಪಲು ಹಾಗೂ ವಿವಿಧ ತಿನಿಸುಗಳ ಹರಾಜು ಭರದಿಂದ ಸಾಗಿತು. ಹರಕೆ ಹೊತ್ತವರು ಕೈಯಲ್ಲಿ ಕೋಲು ಹಿಡಿದು ಮಂಟಪಕ್ಕೆ ಪ್ರದಕ್ಷಣೆ ಹಾಕುವ ದೃಶ್ಯಗಳು ಸಾಮಾನ್ಯವಾಗಿದ್ದವು. ಶ್ರೀ ಮಾರಿಕಾಂಬೆಯ ದೇವಿಯ ಜಾತ್ರೆಯ ಗದ್ದುಗೆಗೆ ಶಿರಸಿ ಕ್ಷೇತ್ರದ ಶಾಸಕ ರಾದ ಭೀಮಣ್ಣ ನಾಯ್ಕ ಮತ್ತು ಸಚಿವ ಮಧು ಬಂಗಾರಪ್ಪರವರ ಕುಟುಂಬದವರು ಶುಕ್ರವಾರ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು. ರಾಜ್ಯದ ಒಳನಾಡು,ಬಂದರು, ಮೀನುಗಾರಿಕೆ ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರವರು ಕುಟುಂಬ ಸಮೇತ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು. ಉತ್ತರಕನ್ನಡ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಯಾದ ದೀಪನ್ ಎಂ. ಎನ್ ಅವರು ಮಾರಿಕಾಂಬೆಯ ದೇವಿಯ ಪೂಜೆಯನ್ನು ಸಲ್ಲಿಸಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಜಾತ್ರೆಯ ಗದ್ದುಗೆಗೆ ಶ್ರೀ ದೇವಿಯ ದರ್ಶನ ಪಡೆಯಲು ಬಂದ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.
