Banner Ad

ಸುದ್ದಿ ಕನ್ನಡ ವಾರ್ತೆ

ಚಿಕ್ಕೋಡಿ: ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ನಿಧನರಾದ ದಾರುಣ ಘಟನೆ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ನಡೆದಿದೆ.

Banner Ad

ತಾಲೂಕಿನ ಬಂಬಲವಾಡ ಗ್ರಾಮದ ಭೂಮಿಕಾ ಮಾಳಂಗಿ (17) ಮೃತಪಟ್ಟ ವಿದ್ಯಾರ್ಥಿನಿ. ಆಕೆ ಚಿಕ್ಕೋಡಿ ಪಟ್ಟಣದ ಚಿಂಚಣಿ ಶ್ರೀ ಸಿದ್ಧಪ್ರಭು ಪದವಿ ಪೂರ್ವ ಕಾಲೇಜುನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ಶನಿವಾರದಿಂದ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ಈ ದುರ್ಘಟನೆ ಸಂಭವಿಸಿದೆ. ಪರೀಕ್ಷೆ ಬರೆಯಲು ಬೆಳಿಗ್ಗೆ ಬೇಗ ಎದ್ದು ಅಧ್ಯಯನ ಮಾಡಿಕೊಂಡು, ಸ್ನಾನ ಮುಗಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಿದ್ಧವಾಗುತ್ತಿದ್ದ ವೇಳೆ ಆಕೆಗೆ ಏಕಾಏಕಿ ಹೃದಯಾಘಾತ ಉಂಟಾಗಿದೆ ಎನ್ನಲಾಗಿದೆ.

ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಮಾರ್ಗ ಮಧ್ಯೆಯೇ ಆಕೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಹಸನ್ಮುಖಿ ಹಾಗೂ ಓದುಗಾರ್ತಿ ವಿದ್ಯಾರ್ಥಿನಿಯ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ಶೋಕಮಯ ವಾತಾವರಣ ನಿರ್ಮಾಣವಾಗಿದೆ. ಪರೀಕ್ಷೆ ದಿನವೇ ನಡೆದ ಈ ಘಟನೆ ಸಹಪಾಠಿಗಳು, ಉಪನ್ಯಾಸಕರು ಹಾಗೂ ಸ್ಥಳೀಯರಲ್ಲಿ ದುಃಖ ಮಡುಗಟ್ಟಿದೆ.

Banner Ad