Banner Ad

ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಸರಾಗವಾಗಿ ತಮ್ಮಷ್ಟಕ್ಕೆ ಹರಿಯುತ್ತಿರುವ ನದಿಗಳನ್ನು ತಿರುಗಿಸುವ ಯೋಜನೆಗಳನ್ನು ವಿರೋಧಿಸಿ ಶಾಂತಿಯುತವಾದ ಹೋರಾಟದ ಪ್ರತೀಕವಾಗಿ ಸೋಮವಾರ ಸಂಜೆ ಶಿರ್ಲೆಬೈಲ್ ಜಲಪಾತದ ಸಮೀಪದಲ್ಲಿ ಸೋಂದಾ ಸ್ವರ್ಣವಲ್ಲಿಯ ಪರಮ ಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಗಂಗಾಪೂಜೆ, ಗಂಗಾರತಿಯನ್ನು ನಡೆಸಲಾಯಿತು.

ಕ್ಷೇತ್ರದಲ್ಲಿ ಇರುವ ಶಿವನ ಸಾನ್ನಿಧ್ಯಕ್ಕೆ ಶತರುದ್ರ ಪೂರ್ವಕ ವಿಶೇಷ ಪೂಜೆ, ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಜನರ ಜೀವನದ ಜೀವನಾಡಿಗಳಾದ, ಪವಿತ್ರವಾದ, ತಾಯಿಯಂತೆ ನಮ್ಮನ್ನು ಸಲಹುವ ನದಿಗೆ ಪರಮ ಪೂಜ್ಯ ಶ್ರೀ ಶ್ರೀಗಳು ಪೂಜೆಯನ್ನು ಸಲ್ಲಿಸಿದರು.

Banner Ad

ನದಿ ತಿರುವು ಯೋಜನೆಯನ್ನು ಕೈಬಿಡಲು ಆಗ್ರಹಿಸಿ ಸರಕಾರಕ್ಕೆ ಮುಟ್ಟಿಸುವ ಪತ್ರವನ್ನು ಪರಮ ಪೂಜ್ಯ ಮಹಾಸ್ವಾಮಿಗಳು ತಮ್ಮ ಹಸ್ತಾಕ್ಷರದೊಂದಿಗೆ ಪತ್ರ ಚಳುವಳಿಗೆ ಚಾಲನೆ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಶ್ರೀ ಮಠದ ಶಿಷ್ಯ ಭಕ್ತರು ಪಾಲ್ಗೊಂಡರು. ಪವಿತ್ರವಾದ ಗಂಗಾ ಮಾತೆಗೆ ಎಲ್ಲರೂ ಪೂಜೆ ಮತ್ತು ಆರತಿಯನ್ನು ನೆರವೇರಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು. “ನದಿಗಳು ಉಳಿದರೆ ಉಳಿದವು ನಾಡು, ನದಿಗಳು ಅಳಿದರೆ ಅಳಿದವು ನಾಡು” ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಪನ್ನವಾಯಿತು.

Banner Ad