ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ: ತಾಲೂಕಿನ ಕವಲಕೊಪ್ಪ ಗ್ರಾಮದಲ್ಲಿ ಆಕಸ್ಮಿಕವಾಗಿ ಸುಮಾರು 70 ಅಡಿ ಆಳದ ಬಾವಿಗೆ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ‘ಶೌರ್ಯ’ ತಂಡ ಹಾಗೂ ಸ್ಥಳೀಯರು ಜಂಟಿ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಮೇಲಕ್ಕೆತ್ತಿ ಪ್ರಾಣ ರಕ್ಷಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಸಿದ್ದಾಪುರ ಅಗ್ನಿಶಾಮಕ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಸಹಾಯಕ ಠಾಣಾಧಿಕಾರಿ ಎ. ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿಗಳಾದ ನಾಗರಾಜ್‌ ಪಟಗಾರ, ವಿನಯ ಕುಮಾರ, ಬಾಳೇಶ ತಳವಾರ, ಪ್ರಸಾದ ನಾಯ್ಕ ಹಾಗೂ 112 ಇ.ಆರ್.ಎಸ್‌.ಎಸ್ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರಿಗೆ ಸಾಥ್ ನೀಡಿದ ವಿಪತ್ತು ನಿರ್ವಹಣಾ ‘ಶೌರ್ಯ’ ತಂಡದ ಸದಸ್ಯರಾದ ವೆಂಕಟೇಶ ಗೌಡ ಕೊಡಗಿಬೈಲ್ ಮತ್ತು ರಾಘವೇಂದ್ರ ನಾಯ್ಕ ಹಾಸಣಿಗೆ ಹಾಗೂ ಸ್ಥಳೀಯ ಸಾರ್ವಜನಿಕರು ಅತ್ಯಂತ ಚಾಕಚಕ್ಯತೆಯಿಂದ ಜಂಟಿಯಾಗಿ ಕಾರ್ಯನಿರ್ವಹಿಸಿ ಆ ವ್ಯಕ್ತಿಯನ್ನು ಯಾವುದೇ ಅಪಾಯವಿಲ್ಲದೆ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಬಾವಿಗೆ ಬಿದ್ದ ವ್ಯಕ್ತಿಯನ್ನು ಸಮಯಪ್ರಜ್ಞೆಯಿಂದ ರಕ್ಷಿಸಿದ ಅಗ್ನಿಶಾಮಕ ದಳ, ಶೌರ್ಯ ತಂಡ ಹಾಗೂ ಸ್ಥಳೀಯರ ಈ ಸಾಹಸಮಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.