ಸುದ್ದಿ ಕನ್ನಡ ವಾರ್ತೆ
. ಶಿರಸಿ:ನಗರದ ವಿಶ್ವಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎನ್. ಎಂ. ಅವರು ಶನಿವಾರ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ಬಾರಿ ಅಳವಡಿಸಲಾಗಿರುವ ಹೈಟೆಕ್ ಭದ್ರತಾ ವ್ಯವಸ್ಥೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಬೃಹತ್ ಪೊಲೀಸ್ ಪಡೆ ನಿಯೋಜನೆ
ಜಾತ್ರೆಯ ಬಂದೋಬಸ್ತ್ ಗಾಗಿ ಬೃಹತ್ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು
ನಿಯೋಜಿಸಲಾಗಿದೆ. ಇದರಲ್ಲಿ 3 ಡಿವೈಎಸ್ಪಿ, 10 ಸಿಪಿಐ, 47 ಪಿಎಸ್ಐ ಮತ್ತು 110 ಎಎಸ್ಐ, 754 ಹೆಡ್ ಕಾನ್ಸ್ಟೇಬಲ್ ಮತ್ತು ಪಿಸಿಗಳು ಸೇರಿದಂತೆ ಒಟ್ಟು 924 ಪುರುಷ ಸಿಬ್ಬಂದಿ ಇರಲಿದ್ದಾರೆ.
ಹೆಚ್ಚುವರಿ ಪಡೆಯಾಗಿ 200 ಹೋಮ್ಗಾರ್ಡ್ಸ್, 3 ಕೆಎಸ್ಆರ್ಪಿ ಪ್ಲಟೂನ್, 5 ಡಿಎಆರ್ ತುಕಡಿ ಹಾಗೂ 1+4 ಆರ್ಮಡ್ ಗಾರ್ಡ್ ತಂಡಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭಕ್ತರ ಸುಗಮ ಸಂಚಾರಕ್ಕಾಗಿ ನಗರದ ವಿವಿಧ ದಿಕ್ಕುಗಳಿಂದ ಬರುವ ವಾಹನಗಳಿಗೆ ಒಟ್ಟು 25 ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ www.sirsipolice.inಎಂಬ ವಿಶೇಷ ವೆಬ್ಸೈಟ್ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಪಾರ್ಕಿಂಗ್ ಸ್ಥಳಗಳ ಲಭ್ಯತೆಯ ಬಗ್ಗೆ ನೈಜ ಸಮಯದ ಮಾಹಿತಿ ದೊರೆಯಲಿದೆ.
ಪಾರ್ಕಿಂಗ್ ಪ್ರದೇಶಗಳಲ್ಲಿ ಮೊಬೈಲ್ ಶೌಚಾಲಯ, ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಗೀತಾ ಪಾಟೀಲ್, ಶಶಿಕಾಂತ ವರ್ಮಾ ಹಾಗೂ ಇತರೆ ಅಧಿಕಾರಿಗಳು ಇದ್ದರು. ಹೈಟೆಕ್ ಭದ್ರತೆ ಮತ್ತು ವಿಶೇಷ ಪಡೆಗಳು:
ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಪತ್ತೆಹಚ್ಚಲು ‘ಫೇಸ್ ರೆಕಗ್ನಿಷನ್’ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವು ಕಳ್ಳರನ್ನು ಗುರುತಿಸಿದ ತಕ್ಷಣ ಕಂಟ್ರೋಲ್ ರೂಂಗೆ ಮಾಹಿತಿ ನೀಡಲಿವೆ. ಜಾತ್ರಾ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳು, ದ್ರೋಣ್ ತಂಡಗಳು ಹಾಗೂ ಸೈ ಸೆಂಟರ್ಗಳನ್ನು ನಿಯೋಜಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ‘ಅಕ್ಕ ವಿಶೇಷ ರಕ್ಷಣಾ ತಂಡ’ ಹಾಗೂ ಹಿರಿಯ ನಾಗರಿಕರ ಸಹಾಯಕ್ಕಾಗಿ ‘ಆಸರೆ ಪಡೆ’ ತಂಡಗಳನ್ನು ರಚಿಸಲಾಗಿದೆ. ಕಾಲ್ತುಳಿತ ಅಥವಾ ನೂಕುನುಗ್ಗಲು ತಡೆಯಲು ವಿಶೇಷ ಕಮಾಂಡೋ ಪಡೆ (QRT) ಕಾರ್ಯಾಚರಣೆ ನಡೆಸಲಿದೆ.
ಜಾತ್ರೆಗೆ ಬರುವವರು ತಮ್ಮ ಆಭರಣ ಹಾಗೂ ಮಕ್ಕಳ ಬಗ್ಗೆ ಜಾಗೃತರಾಗಿರಬೇಕು. ಮನೆ ಬಿಟ್ಟು ಬರುವಾಗ ಒಬ್ಬರನ್ನಾದರೂ ಮನೆಯಲ್ಲಿ ಇರಿಸಿ ಅಥವಾ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ.
ದೀಪನ್ ಎಂ. ಎನ್.,ಎಸ್ಪಿ ಉತ್ತರ ಕನ್ನಡ.
