Banner Ad

ಸುದ್ದಿ ಕನ್ನಡ ವಾರ್ತೆ

ಹಳಿಯಾಳ:ತಾಲೂಕಿನ ವ್ಯಾಪ್ತಿಯ ದಾಂಡೇಲಿ- ಭಾಗವತಿ ರಸ್ತೆಯಲ್ಲಿ ಒಂಟಿ ಸಲಗವೊಂದು ರಸ್ತೆಯ ಮಧ್ಯದಲ್ಲಿ ಓಡಾಡುವ ಮೂಲಕ ವಾಹನಗಳನ್ನು ಸುಮಾರು ಅರ್ಧ ಗಂಟೆಗಳ ಕಾಲ ಹೆಚ್ಚಿನ ಸಮಯ ವಾಹನ ಸಂಚಾರಕ್ಕೆ ತೊಂದರೆ ಮಾಡಿದೆ. ಭಾಗವತಿ ಗ್ರಾಮದ ಸುತ್ತಮುತ್ತಲ ಪ್ರದೇಶಗಳ,ಜೊತೆ ಸಾರ್ವಜನಿಕ ರಸ್ತೆಯ ಓಡಾಡುವ ಪ್ರದೇಶಗಳಲ್ಲಿ ಒಂಟಿ ಸಲಗವು ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಭೀತಿ ಮೂಡಿಸಿದೆ.

Banner Ad

ಗುರುವಾರ ಮಧ್ಯಾಹ್ನದ ವೇಳೆಗೆ ದಾಂಡೇಲಿ-ಭಾಗವತಿ ಮುಖ್ಯ ರಸ್ತೆಯಲ್ಲಿ ಪ್ರತ್ಯಕ್ಷವಾದ ಒಂಟಿ ಸಲಗವು ರಸ್ತೆಯ ಮಧ್ಯೆಯೇ ಬೀಡುಬಿಟ್ಟಿತ್ತು. ಈ ವೇಳೆ ಸಂಚರಿಸುತ್ತಿದ್ದ ವಾಹನಗಳ ಮೇಲೆ ದಾಳಿ ಮಾಡಲು ಮುಂದಾದಾಗ, ಭಯಭೀತರಾದ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿಹೋದ ಘಟನೆ ಸಂಭವಿಸಿದೆ.

ಕಳೆದ ಕೆಲವು ದಿನಗಳಿಂದ ಇದೇ ಭಾಗದಲ್ಲಿ ಆನೆ ಕಾಣಿಸಿಕೊಳ್ಳುತ್ತಿದ್ದು, ರಾತ್ರಿ ಮತ್ತು ಮಧ್ಯಾಹ್ನದ ವೇಳೆಯಲ್ಲಿ ಓಡಾಡುವ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳನ್ನು ಕೆಲ ವಾಹನ ಸವಾರರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ನಂತರ ಆನೆ ಕಾಡಿನ ಕಡೆಗೆ ತೆರಳಿದ ಬಳಿಕ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತು.

ಭಾಗವತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುವುದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆನೆಗಳ ಸಂಚಾರ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Banner Ad