ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಾ ದಂಡಾಧಿಕಾರಿಗಳ ಕಛೇರಿಯಲ್ಲಿ ಬಂಜಾರಾ ಜನಾಂಗದ ಆರಾಧ್ಯ ದೇವರಾದ ಶ್ರೀ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಆಚರಿಸಲಾಯಿತು.

ತಹಶೀಲ್ದಾ‌ರ್ ಚಂದ್ರಶೇಖರ ಹೊಸಮನಿ ಮಾತನಾಡಿ, ಶ್ರೀ ಸಂತ ಸೇವಾಲಾಲರ ಆದರ್ಶಗಳು ಅವರು ಸಾರಿದ ಸಂದೇಶಗಳು ಅವರು ನುಡಿದಿರುವ ಭವಿಷ್ಯದ ವಾಣಿಗಳು, ಇಡಿ ಮಾನವ ಸಮಾಜಕ್ಕೆ ಪ್ರೇರಣೆಯಾಗಿದೆ. ಅವರ ವಾಣಿಯಲ್ಲಿ ಒಂದಾದ “ರಾಬಜನಾ ಚಾಬೇನ್ ಮಳಚ” ಅಂದರೆ ಪ್ರತಿಯೊಬ್ಬ ವ್ಯಕ್ತಿ ಕಷ್ಟ ಪಟ್ಟು ದುಡಿಯಬೇಕು, ದುಡಿದಾಗಲೆ ತಿನ್ನೋಕೆ ಅನ್ನ ಸಿಗೋದು ಎಂಬ ನುಡಿಯನ್ನು ಸ್ಮರಿಸಿ ಎಲ್ಲರಿಗೂ ಕಾಯಕದ ಮಹತ್ವ ಸಾರಿದರು.

ಕಾರ್ಯಕ್ರಮದಲ್ಲಿ ಬಂಜಾರ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ, ಶಿಕ್ಷಕ ಗಂಗಾಧರ ಎಸ್ ಲಮಾಣಿ ಶ್ರೀ ಸಂತ ಸೇವಾಲಾಲರ ಮಹಾರಾಜರ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ಈ ಸಂದರ್ಭದಲ್ಲಿ ತಾಂಡಾದ ನಾಯಕರಾದ ಈಶ್ವ‌ರ ರಾಠೋಡ, ಬಂಜಾರ ಸೇವಾ ಪ್ರತೀಷ್ಠಾನದ ಅಧ್ಯಕ್ಷ ಶಂಕರ ನಾಯಕ, ಬಂಜಾರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಭೀಮಸಿಂಗ್ ಲಮಾಣಿ, ನಿವೃತ್ತ ಪಿಎಸ್‌ಐ ಚವ್ಹಾಣ, ಸಮಾಜದ ಪ್ರಮುಖರು, ತಹಶೀಲ್ದಾರ ಕಛೇರಿಯ ಸಿಬ್ಬಂದಿಗಳು ಇದ್ದರು.