ಸುದ್ದಿ ಕನ್ನಡ ವಾರ್ತೆ
ಶಿರಸಿ: ವಿಶ್ವಪ್ರಸಿದ್ದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಮಹಾಜಾತ್ರಾ ಮಹೋತ್ಸವದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳಿಗೆ ದೊರೆತಿದ್ದು, ಚಾಲನೆ ಸಿದ್ದಾಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಭೀಮಣ್ಣ ಟಿ. ನಾಯ್ಕ ತಾಲೂಕಿನ ದೊಡ್ನಳ್ಳಿ ಪಂಚಾಯತ ವ್ಯಾಪ್ತಿಯ ಬಿಕ್ಕಳ್ಳಿ ಗ್ರಾಮದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಾತ್ರೆಯ ರಥದ ನಿರ್ಮಾಣಕ್ಕಾಗಿ ಬಳಸಲಾಗುವ ಮರಕ್ಕೆ ಶಾಸ್ರೋಕ್ತವಾಗಿ ಪೂಜೆ ಸಲ್ಲಿಸಿ, ಕಚ್ಚು ಹಾಕುವ ಪುರಾತನ ಸಂಪ್ರದಾಯದಂತೆ ಬಿಕ್ಕಳ್ಳಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಪವಿತ್ರ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿ, ದೇವಿಗೆ ಪ್ರಾರ್ಥನೆ ಸಲ್ಲಿಸಿ ರಥದ ಮರಕ್ಕೆ ಕಚ್ಚು ಹಾಕುವ ಕಾರ್ಯಕ್ಕೆ ಚಾಲನೆ ನೀಡಿದರು.
ಮುಂಬರುವ ಮಾರಿಕಾಂಬಾ ಜಾತ್ರೆಯು ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನೆರವೇರಲಿ ಮತ್ತು ಕ್ಷೇತ್ರದ ಜನತೆಗೆ ದೇವಿಯು ಸನ್ಮಂಗಳವನ್ನು ಉಂಟುಮಾಡಲಿ ಎಂದು ಶಾಸಕರು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು, ಪ್ರಮುಖರು ಹಾಗೂ ಬಿಕ್ಕಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
