ಸುದ್ದಿ ಕನ್ನಡ ವಾರ್ತೆ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದ್ರಾ ನಿವಾಸಿ ರಿಶೆಲ್ ಡಿ’ಸೋಜಾ ಆತ್ಮಹತ್ಯೆ ಪ್ರಕರಣದ ಆರೋಪಿ ಚಿರಾಗ್ ಕೊಠಾರಕರ್ ಜಾಮೀನು ಅರ್ಜಿಯನ್ನು ಕಾರವಾರದ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ಜನವರಿ 9ರಂದು ರಿಶೆಲ್ ಕ್ರಿಸ್ತೋದ್ ಡಿಸೋಜಾ ಆತ್ಮಹತ್ಯೆ ಬಳಿಕ ಆರೋಪಿ ಚಿರಾಗ್ ತಲೆಮರೆಸಿಕೊಂಡಿದ್ದ. ಸಾಕಷ್ಟು ಸಮಯಗಳ ಬಳಿಕ ಜ.30ರಂದು ಚೆನ್ನೈನಲ್ಲಿ ಅಂಕಲ್ ಮನೆಯಲ್ಲಿ ಬಂಧನಕ್ಕೊಳಗಾಗಿದ್ದ.
ಆರೋಪಿ ಚಿರಾಗ್ ಕೊಠಾರ್‌ಕರ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲದೇ, ಹೆಚ್ಚಿನ ವಿಚಾರಣೆಗೆ 9 ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಚಿರಾಗ್ ಅಂಕಲ್ ಹಾಗೂ ಚಿಕ್ಕಮ್ಮನನ್ನೂ ಸಹ ಪೊಲೀಸರು ಬಂಧಿಸಿದ್ದರು.ನ್ಯಾಯಾಲಯವು ಫೆ.10ರವರೆಗೆ ಆರೋಪಿ ಚಿರಾಗ್‌ನನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿತ್ತು. ಜಾಮೀನು ಅರ್ಜಿಯ ವಿಚಾರಣೆಯನ್ನು ಫೆ.10ರಂದು ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ನ್ಯಾಯಾಲಯ ಫೆ.10ರಂದು ತೀರ್ಪು ಪ್ರಕಟಿಸಿದ್ದು, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.ಪ್ರಕರಣ ಗಂಭೀರತೆ, ಆರೋಪಿ ತಲೆ ಮರೆಸಿಕೊಂಡಿದ್ದ ವಿಚಾರ ಮುಂತಾದವುಗಳನ್ನು ಗಮನಿಸಿ ಕಾರವಾರದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ನ್ಯಾಯಮೂರ್ತಿ ಪರಮೇಶ್ವರ ಪ್ರಸನ್ನ ಬಿ. ಅವರು ಚಿರಾಗ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟ‌ರ್ ತನುಜಾ ಹೊಸಪಟ್ಟಣ ಅವರು ವಾದಿಸಿದ್ದರು.
ತನಿಖಾಧಿಕಾರಿ ಕದ್ರಾ ಪೊಲೀಸ್‌ ನಿರೀಕ್ಷಕ ಪ್ರಭಾಕ‌ರ್ ತನಿಖಾ ವರದಿಗಳನ್ನು ಸಲ್ಲಿಸಿದ್ದರು.
ಸದ್ಯ ಜಿಲ್ಲಾ ನ್ಯಾಯಾಲಯದಲ್ಲಿ ಚಿರಾಗ್, ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆ ಕೊಠಾರ್‌ಕರ್‌ ಕುಟುಂಬ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ.