ಸುದ್ದಿ ಕನ್ನಡ ವಾರ್ತೆ
ಜೋಯಿಡಾ: 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಜೋಯಿಡಾ ತಾಲೂಕಿನ ರಾಮನಗರದಲ್ಲಿ ಶ್ರೀ ತುಳಜಾಭವಾನಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಹಾಗೂ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ ಕ್ಷತ್ರಿಯ ಮರಾಠ ಪರಿಷತ್‌ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರಾದ ಆ‌ರ್.ವಿ. ದೇಶಪಾಂಡೆ ಅವರು ಭೂಮಿ ಪೂಜೆ ನೆರವೇರಿಸಿ ಶಂಕುಸ್ಥಾಪನೆ ಕೈಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆ‌ರ್.ವಿ. ದೇಶಪಾಂಡೆ ಅವರು, ಗ್ರಾಮೀಣ ಭಾಗಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೌಕರ್ಯಗಳ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದ್ದು, ದೇವಸ್ಥಾನಗಳ ಜೀರ್ಣೋದ್ದಾರ ಮತ್ತು ಸಮುದಾಯಭವನಗಳ ನಿರ್ಮಾಣದಿಂದ ಸಮಾಜದಲ್ಲಿ ಸೌಹಾರ್ದತೆ ಹಾಗೂ ಒಗ್ಗಟ್ಟು ಹೆಚ್ಚಲಿದೆ ಎಂದರು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮರಾಠ ಜಗದ್ಗುರು ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಗಳು, ಶ್ರೀಮತಿ ರಾಧಾ ಆರ್. ದೇಶಪಾಂಡೆ, ಗ್ರಾಮ ಪಂಚಾಯತ ಅಧ್ಯಕ್ಷರು, ಬಿಸಿಸಿ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳಸಪ್ರಾಯವಾಗಿ ಸಹಕರಿಸಿದರು. ಭೂಮಿ ಪೂಜೆ ಕಾರ್ಯಕ್ರಮವನ್ನು ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಂಡು ಅಭಿವೃದ್ಧಿ ಕಾರ್ಯಗಳಿಗೆ ಸಂತಸ ವ್ಯಕ್ತಪಡಿಸಿದರು.