ಸುದ್ಧಿಕನ್ನಡ ವಾರ್ತೆ
Goa: ಭಾರತ ದೇಶದಲ್ಲಿ ಅತ್ಯಂತ ಪುಟ್ಟ ರಾಜ್ಯವೆಂದರೆ ಅದು ಗೋವಾ ರಾಜ್ಯ. ಗೋವಾ ಪುಟ್ಟ ರಾಜ್ಯವಾಗಿದ್ದರೂ ಕೂಡ ಇಲ್ಲಿನ ಸುಂದರ ಪ್ರವಾಸಿ ತಾಣಗಳ ಮೂಲಕ ಜಗತ್ತಿನಲ್ಲಿಯೇ ಅತ್ಯಂತ ಆಕರ್ಷಣೀಯ ರಾಜ್ಯವಾಗಿದೆ. ಗೋವಾದಲ್ಲಿ ಜನಜೀವನದ ಖರ್ಚು ವೆಚ್ಛ ದೇಶದಲ್ಲಿಯೇ ಕಡಿಮೆ ಇದೆ ಎಂದರೂ ತಪ್ಪಾಗಲಾರದು. ಇಂತಹ ಸಂದರ್ಭದಲ್ಲಿ ದೇಶದಲ್ಲಿ NSSO ವೈದ್ಯಕೀಯ ಕ್ಷೇತ್ರಗಳ ಚಿಕಿತ್ಸೆ ವೆಚ್ಛಗಳ ಕುರಿತು ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ ಗೋವಾ ವೈದ್ಯಕೀಯ ವೆಚ್ಛ ದೇಶದಲ್ಲಿಯೇ ಅತ್ಯಂತ ಕಡಿಮೆ ಎಂಬ ಅಂಶ ಬೆಳಕಿಗೆ ಬಂದಿದೆ.
ದೇಶಕ್ಕೆ ಹೋಲಿಸಿದರೆ ಗೋವಾದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಅತೀ ಕಡಿಮೆ ವೆಚ್ಛ ಎಂದೇ ಹೇಳಲಾಗುತ್ತದೆ. ಗೋವಾದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಆಸ್ಪತ್ರೆಯ ದಾಖಲಾತಿಗೆ ಸರಾಸರಿ ವೈದ್ಯಕೀಯ ವೆಚ್ಚವು ರಾಷ್ಟ್ರೀಯ ಸರಾಸರಿಯ ಅರ್ಧಕ್ಕಿಂತ ಕಡಿಮೆಯಾಗಿದೆ. ಕೇಂದ್ರೀಯ ಅಂಕಿಅಂಶ ಮತ್ತು ಯೋಜನಾ ಅನುಷ್ಠಾನ ವಿಭಾಗದ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO ) ನಡೆಸಿದ ಸಮೀಕ್ಷೆ ವರದಿಯಿಂದ ಈ ಅಂಶ ಬೆಳಕಿಗೆ ಬಂದಿದೆ. ಈ ಸಮೀಕ್ಷೆಯನ್ನು ಜುಲೈ 2022 ಮತ್ತು ಜೂನ್ 2023 ರ ನಡುವೆ ನಡೆಸಲಾಗಿತ್ತು.
NSSO ಗೋವಾದ 639 ಗ್ರಾಮೀಣ ಮತ್ತು 314 ನಗರ ಕುಟುಂಬಗಳಿಂದ 3,645 ವ್ಯಕ್ತಿಗಳನ್ನು ಸಮೀಕ್ಷೆ ಮಾಡಿದೆ. ಇದರ ಪ್ರಕಾರ 2022-23 ರ ಅವಧಿಯಲ್ಲಿ ಗೋವಾದ ಗ್ರಾಮಾಂತರ ಪ್ರದೇಶದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬರು ಸರಾಸರಿ ರೂ. 274, ಮೇಘಾಲಯ (ರೂ 393) ಮತ್ತು ಛತ್ತೀಸ್‍ಗಢ ( ರೂ 532) ವೈದ್ಯಕೀಯ ವೆಚ್ಛವಾಗಿದೆ. ರಾಷ್ಟ್ರೀಯ ಸರಾಸರಿ 1,035 ರೂ. ಗೋವಾದಲ್ಲಿ ಕುಟುಂಬವೊಂದಕ್ಕೆ 1,097 ರೂ. ಒಂದು ಕುಟುಂಬಕ್ಕೆ ರಾಷ್ಟ್ರೀಯ ಸರಾಸರಿ 4,496 ರೂ.ವೆಚ್ಛವಾಗಿದೆ.
ಮೇಲಿನ ಅವಧಿಯಲ್ಲಿ, ಗೋವಾದ ನಗರ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಸರಾಸರಿ ರೂ.625 ವೆಚ್ಚವಾಗಿದೆ. ನಾಗಾಲ್ಯಾಂಡ್ (ರೂ. 740) ಮತ್ತು ಅರುಣಾಚಲ ಪ್ರದೇಶದ (ರೂ. 766) ನಗರ ಪ್ರದೇಶಗಳಲ್ಲಿ ಸರಾಸರಿ ತಲಾ ವೆಚ್ಚ ಕಡಿಮೆಯಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್‍ನಲ್ಲಿ ಗ್ರಾಮೀಣ ಪ್ರದೇಶದಲ್ಲಿ 85 ರೂ. ಮತ್ತು ನಗರ ಪ್ರದೇಶಗಳಲ್ಲಿ 138 ರೂ. ಆದರೆ ಈ ರಾಷ್ಟ್ರೀಯ ಸರಾಸರಿ 1,879 ರೂ. ಆಗಿದೆ. ಗೋವಾದಲ್ಲಿ ಒಂದು ಕುಟುಂಬಕ್ಕೆ ವೈದ್ಯಕೀಯ ವೆಚ್ಛ ಸರಾಸರಿ 2,253 ರೂ. ಆಗಿದೆ. ಆದರೆ ಒಂದು ಕುಟುಂಬಕ್ಕೆ ರಾಷ್ಟ್ರೀಯ ಸರಾಸರಿ 6,877 ರೂ. ವೆಚ್ಛವಾಗಿದೆ. ಇದರಿಂದಾಗಿ ಗೋವಾದಲ್ಲಿ ವೈದ್ಯಕೀಯ ವೆಚ್ಛ ದೇಶದಲ್ಲಿಯೇ ತೀರಾ ಕಡಿಮೆ ಎಂದೇ ಅಂಕಿ ಅಂಶ ಹೇಳುತ್ತದೆ.
ಗೋವಾ ರಾಜ್ಯದಲ್ಲಿ ಇತರೆ ವೆಚ್ಚಗಳೂ ಕಡಿಮೆ…!
NSSO ನೀಡಿರುವ ವರದಿಯ ಪ್ರಕಾರ, ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಆರೋಗ್ಯ ವಿಮೆಗೆ ಒಳಪಡದ ಇತರ ವೆಚ್ಚಗಳು ಸಹ ಗೋವಾ ರಾಜ್ಯದಲ್ಲಿ ಕಡಿಮೆಯೇ ಆಗಿದೆ. ಗೋವಾದ ನಗರ ಪ್ರದೇಶಗಳಲ್ಲಿ ರೋಗಿ ವರ್ಷಕ್ಕೆ ಸರಾಸರಿ 488 ರೂ. ಖರ್ಚು ಮಾಡಿದರೆ, ರಾಷ್ಟ್ರೀಯ ಸರಾಸರಿ 1,446 ರೂ. ಖರ್ಚಾಗಲಿದೆ. ಗೋವಾದ ಗ್ರಾಮೀಣ ಪ್ರದೇಶದ ಒಬ್ಬ ರೋಗಿಗೆ ಸರಾಸರಿ 227 ರೂ. ವೈದ್ಯಕೀಯ ವೆಚ್ಛವಾದರೆ, ಇದು ರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿ ವಾರ್ಷಿಕ 950 ರೂ. ಖರ್ಚಾಗಲಿದೆ ಎಂದು ಅಂಕಿ ಅಂಶ ಹೇಳಿದೆ.
ಅದೇನೆ ಇದ್ದರೂ ಕೂಡ ಗೋವಾ ರಾಜ್ಯದಲ್ಲಿ ವೈದ್ಯಕೀಯ ವೆಚ್ಛ ದೇಶದಲ್ಲಿಯೇ ಅತ್ಯಂತ ಕಡಿಮೆ ಎಂಬುದು ಶ್ಲಾಘನೀಯ ಸಂಗತಿಯಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಮಧ್ಯಮ ಮತ್ತು ಬಡ ವರ್ಷಗಳು ಕಷ್ಟ ಪಡುವುದನ್ನು ನಾವು ಕಾಣುತ್ತೇವೆ, ಆದರೆ ಈ ನಿಟ್ಟಿನಲ್ಲಿ ಗೋವಾ ವೈದ್ಯಕೀಯ ಕ್ಷೇತ್ರ ಶ್ಲಾಘನೀಯ ಸೇವೆ ಮಾಡುತ್ತಿದೆ.