Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಉಳವಿಯ ಶ್ರೀ ಚನ್ನಬಸವೇಶ್ವರ ಜಾತ್ರೆಯ ಹಿನ್ನೆಲೆ ಹಳಿಯಾಳ–ದಾಂಡೇಲಿ ರಸ್ತೆ ಭಾಗದಲ್ಲಿ ಕಳೆದ ಕೆಲ ದಿನಗಳಿಂದಲೇ ಭಕ್ತಿಯ ವಾತಾವರಣ ಮನೆ ಮಾಡಿದೆ. ಮುಂಜಾನೆಯಿಂದಲೇ “ಹರ ಹರ ಮಹಾದೇವ”, “ಬಸವ ಓಡು”, “ಉಳವಿ ಚನ್ನಬಸವೇಶ್ವರ ಕೀ ಜೈ” ಎಂಬ ಜಯಘೋಷಗಳು ಮೊಳಗಿ, ಭಕ್ತರು ಪಾದಯಾತ್ರೆ ಹಾಗೂ ಚಕ್ಕಡಿ ಗಾಡಿ,ವಾಹನಗಳ ಮೂಲಕ ಆಗಮಿಸಿ ಶ್ರೀ ಚನ್ನಬಸವೇಶ್ವರ ಜಾತ್ರೆಯ ರಥೋತ್ಸವಕ್ಕೆ ಕಾತರರಾಗಿದ್ಠಾರೆ.

ಪ್ರತಿ ವರ್ಷ ರಥಸಪ್ತಮಿಯ ದಿನದಂದು ಜಾತ್ರೆಗೆ ಚಾಲನೆ ದೊರೆಯುತ್ತದೆ. ಸಾಮಾನ್ಯವಾಗಿ ಸುಮಾರು 8 ರಿಂದ 12 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಮಧ್ಯದಲ್ಲಿ ನಡೆಯುವ ಮಹಾರಥೋತ್ಸವ ಸಾವಿರಾರು ಭಕ್ತರನ್ನು ಆಕರ್ಷಿಸುವ ಪ್ರಮುಖ ಕಾರ್ಯಕ್ರಮವಾಗಿರುತ್ತದೆ. ಕೊನೆಯ ದಿನಗಳವರೆಗೆ ಭಕ್ತರ ದಂಡೇ ಹರಿದು ಬರುತ್ತದೆ.

Banner Ad

ಚಕ್ಕಡಿ ಯಾತ್ರೆ – ಗ್ರಾಮೀಣ ಭಕ್ತಿಯ ಗುರುತು

ಉತ್ತರ ಕರ್ನಾಟಕದ ಭಾಗದಲ್ಲಿ ಉಳವಿ ಜಾತ್ರೆ ಎಂದರೆ ಚಕ್ಕಡಿ (ಎತ್ತು ಗಾಡಿ) ಯಾತ್ರೆಯೇ ವಿಶೇಷ. ಇಂದಿನ ಆಧುನಿಕ ಯುಗದಲ್ಲಿಯೂ ಹಲವರು ಹರಕೆ ಮತ್ತು ನಂಬಿಕೆಯ ಭಾಗವಾಗಿ ಎತ್ತಿನ ಗಾಡಿಯಲ್ಲೇ ಪಯಣಿಸುತ್ತಾರೆ.
ಚಕ್ಕಡಿಗಳಿಗೆ ಬಣ್ಣದ ಅಲಂಕಾರ, ಕೇಸರಿ ಧ್ವಜಗಳು, ಬಸವೇಶ್ವರರ ಭಾವಚಿತ್ರಗಳು, ಎತ್ತುಗಳಿಗೆ ಗಂಟೆ–ಗೆಜ್ಜೆ ಕಟ್ಟಿದ ಸಂಭ್ರಮ – ಇವೆಲ್ಲವು ಗ್ರಾಮೀಣ ಸಂಸ್ಕೃತಿಯ ಸೊಗಸನ್ನು ಮೆರೆದಿವೆ.

ಪಾದಯಾತ್ರೆ ಮತ್ತು ಸೇವಾಭಾವ

ಧಾರವಾಡ, ಹಾವೇರಿ, ಬೆಳಗಾವಿ, ಬೈಲಹೊಂಗಲ, ಕಲಘಟಗಿ ಸೇರಿದಂತೆ ಅನೇಕ ಕಡೆಗಳಿಂದ ಭಕ್ತರು ಪಾದಯಾತ್ರೆಯಾಗಿ ಆಗಮಿಸುತ್ತಿದ್ದಾರೆ. ಮಾರ್ಗ ಮಧ್ಯೆ ಅನೇಕ ಸಂಘ–ಸಂಸ್ಥೆಗಳು ಹಾಗೂ ಮಠಗಳು ಅನ್ನದಾಸೋಹ ವ್ಯವಸ್ಥೆ ಮಾಡಿ ಭಕ್ತರಿಗೆ ಸೇವೆ ಸಲ್ಲಿಸುತ್ತಿವೆ. ವಿಶ್ರಾಂತಿ ಪಡೆದು ಮತ್ತೆ ಭಕ್ತರು ತಮ್ಮ ಪಯಣ ಮುಂದುವರಿಸುತ್ತಾರೆ.

ಪರಿಸರದ ಕಡೆ ಗಮನ ಅಗತ್ಯ.

ಅರಣ್ಯ ಪ್ರದೇಶಗಳಲ್ಲಿ ಕೆಲ ಯಾತ್ರಿಗಳು ಅಡುಗೆ ಮಾಡಿದ ಬಳಿಕ ಸ್ಥಳ ಸ್ವಚ್ಛತೆ ಕಡೆ ನಿರ್ಲಕ್ಷ್ಯ ತೋರುತ್ತಿರುವುದು ಗಮನಕ್ಕೆ ಬಂದಿದೆ. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಲವೆಡೆ ಚಕ್ಕಡಿ ಗಾಡಿಗಳ ಸಂಚಾರದಿಂದ ವಾಹನ ಸಂಚಾರಕ್ಕೂ ಅಲ್ಪ ಮಟ್ಟಿನ ತೊಂದರೆ ಉಂಟಾಗುತ್ತಿರುವುದು ಕಂಡುಬರುತ್ತಿದೆ.

ಭಕ್ತರ ಭಾವನೆ.

“ಬೆಳೆ ಕಟಾವಿನ ನಂತರ ಸ್ನೇಹಿತರು, ಬಂಧುಗಳು ಸೇರಿ ಚಕ್ಕಡಿ ಕಟ್ಟುತ್ತೇವೆ. ಎತ್ತುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಿಕೊಂಡು ನಿಧಾನವಾಗಿ ಪಯಣಿಸುತ್ತೇವೆ. ಕುಟುಂಬದ ಕಲ್ಯಾಣ, ಮಳೆ–ಬೆಳೆ ಸಮೃದ್ಧಿಯಾಗಲಿ ಎಂಬ ನಂಬಿಕೆಯಿಂದ ಪ್ರತಿವರ್ಷ ಬರುತ್ತೇವೆ” ಎಂದು ಭಕ್ತರು ಹೇಳುತ್ತಾರೆ.

ಉತ್ತರ ಕನ್ನಡದ ದಟ್ಟ ಕಾಡಿನ ಮಧ್ಯೆ ನೆಲೆಸಿರುವ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಭಕ್ತರ ಅಪಾರ ನಂಬಿಕೆಯ ಕೇಂದ್ರವಾಗಿದ್ದು, ಜಾತ್ರೆಯ ಈ ಭಕ್ತಿ–ಸಂಸ್ಕೃತಿ ಸಂಭ್ರಮ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಭರದಿಂದ ನಡೆಯುತ್ತಿದೆ. ಜಿಲ್ಲಾಡಳಿತ,ಕಂದಾಯ ಇಲಾಖೆ, ಅರಣ್ಯ ಇಲಾಖೆ,ಪೋಲಿಸ್ ಇಲಾಖೆ,ಸ್ಥಳೀಯ ಗ್ರಾಮ ಪಂಚಾಯತನವರು,ದೇವಸ್ಥಾನ ಸಮಿತಿಯವರು ಜಾತ್ರೆಯ ಯಶಸ್ಸಿಗೆ ವಿಶೇಷ ಸಕಲ ವ್ಯವಸ್ಥೆಯನ್ನು ಮಾಡಿದ್ದಾರೆ.

Banner Ad