ಸುದ್ದಿ ಕನ್ನಡ ವಾರ್ತೆ
GOA: ವಿಜಯದಶಮಿ ಆರಂಭದಲ್ಲಿ ‘ಸದ್ಯ ಬೆಲೆ ಕಡಿಮೆ ಇದೆಯಪ್ಪಾ’ ಎಂದು ನಿತ್ಯ ಪೂಜೆಗೆ ಹೂವು ಖರೀದಿಸುತ್ತಿದ್ದ ಜನ, ಈಗ ‘ಒಂದ ವಾರದಾಗ ಎಷ್ಟ ರೇಟ್ ಹೆಚ್ಚಾಗೇತೆಲ್ಲ’ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದೆ.
ಅಲ್ಲದೆ ಹಬ್ಬದ ಹತ್ತೂ ದಿನ ನಿತ್ಯ ಬೆಳ್ಳಿಗೆ ಮತ್ತು ಸಂಜೆ ಪೂಜೆಗಳ ಬಳಿಕ ಅಗತ್ಯವಾಗಿ ಬೇಕಾಗುವ ತೆಂಗಿನಕಾಯಿ ದರ ಬಹುತೇಕ ದುಪ್ಪಟ್ಟಾಗಿದೆ. ಕಳೆದ ತಿಂಗಳು ಒಂದು ತೆಂಗಿನಕಾಯಿಗೆ ₹15–₹20ಇತ್ತು. ಸದ್ಯ ₹25–₹40ಕ್ಕೆ (ಗಾತ್ರದ ಆಧಾರದಲ್ಲಿ) ತಲುಪಿದೆ.
ಹಣ್ಣುಗಳ ಬೆಲೆ: ಮಾರುಕಟ್ಟೆಯಲ್ಲಿ ಅತಿ ಕಡಿಮೆ ಕಂಡುಬರುವ ಏಲಕ್ಕಿ ಬಾಳೆ ಕೆ.ಜಿ ₹80 ಇದ್ದರೆ, ಪಚ್ಚಬಾಳೆ ದರ ಡಜನ್‌ಗೆ ₹40–₹50 ಇದೆ.
ಸದ್ಯ ಮಾರುಕಟ್ಟೆಯಲ್ಲಿ ಪೇರಲ ಮತ್ತು ಸೇಬು, ಸೀತಾಫಲ ಹಣ್ಣುಗಳು ಹೆಚ್ಚಾಗಿ ಕಂಡುಬರುತ್ತಿದ್ದು ಇವುಗಳ ಬೆಲೆ ಕ್ರಮವಾಗಿ ಪೇರಲ ಹಣ್ಣು ಕೆ.ಜಿಗೆ ₹60 ಮತ್ತು ₹120 ಇದೆ. ಸೀತಾಫಲ ಹಣ್ಣುಗಳನ್ನು ಬಿಡಿಯಾಗಿಯೂ ಖರೀದಿಸಲಾಗುತ್ತಿದೆ. ಉಳಿದಂತೆ; ದಾಳಿಂಬೆ ₹120, ಕರ್ಜೂರ ₹70 ಇದೆ. ₹100ಕ್ಕೆ 2–3 ಪಪ್ಪಾಯ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಬಹುತೇಕರು ಹಣ್ಣುಗಳನ್ನು ₹100, ₹50 ಲೆಕ್ಕದಲ್ಲಿ ಖರೀದಿಸುತ್ತಿರುವುದು ಕಂಡು ಬಂತು.
ಹೂವುಗಳ ಬೆಲೆ: ಶ್ರಾವಣಕ್ಕೆ ಹೋಲಿಸಿದರೆ ವಿಜಯದಶಮಿಯಲ್ಲಿ ಹೂವುಗಳ ಬೆಲೆಯಲ್ಲಿ ದೊಡ್ಡ ವ್ಯತ್ಯಾಸವೇನೂ ಕಂಡುಬಂದಿಲ್ಲ.
ಮನೆ ಮತ್ತು ಪೂಜೆ ಕೋಣೆ ಅಲಂಕಾರಕ್ಕೆ ಅಗತ್ಯವಾಗಿ ಬೇಕಾಗುವ ಕೇಸರಿ ಬಣ್ಣದ ಚಂಡು ಹೂವುಗಳ ಬೆಲೆ ₹60–70 ಇದ್ದರೆ ಹಳದಿ ಬಣ್ಣದ ಚಂಡು ಹೂವುಗಳು ₹50–60 ನಂತೆ ಮಾರಾಟವಾಗುತ್ತಿವೆ. ಕೆ.ಜಿ ಕಟ್ ರೋಸ್‌ಗೆ ₹100–₹120 ಇದೆ. ಕಡ್ಡಿ ಇರುವ ಒಂದು ತಾಜಾ ಗುಲಾಬಿ ಬೆಲೆ ₹15–₹20 ಇದೆ.
ಮಲ್ಲಿಗೆ ಹೂವನ್ನು ಬಹುತೇಕರು ಮೊಳ, ಮಾರುಗಳ ಲೆಕ್ಕದಲ್ಲಿ ಖರೀದಿಸುತ್ತಿದ್ದಾರೆ.
ಉಡಿ ತುಂಬಲು, ಕುಂಭ–ಕಳಸಕ್ಕೆ ಇಡಲು ಬೇಕಾಗುವ ಎಲೆಗಳ ಬೆಲೆ 100ಕ್ಕೆ ₹60–₹70 ಇದೆ. ಪಟ್ಟಣದ ಸುತ್ತಲಿನ ಗ್ರಾಮಗಳ ಜನರು ಮಾವಿನ ಎಲೆಗಳನ್ನು ಹಿಡಿಗಳ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ.