ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಕೆಲ ಸಮಯ ಸುರಿದ ಧಾರಾಕಾರ ಮಳೆಗೆ ಭೂಕುಸಿತದಿಂದ ಈ ಹಿಂದೆ ಭಾರೀ ಆತಂಕದಿಂದಾಗಿ ಸುದ್ದಿಗೊಳಗಾದ ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ಇದೀಗ ಮತ್ತೆ ಆರಂಭಗೊಂಡ ಮಳೆಗೆ ರಸ್ತೆ ಕೊಚ್ಚಿ ಹೋದ ಘಟನೆ ವರದಿಯಾಗಿದೆ.

ಕಳಚೆಯ ಹೊಸಕುಂಬ್ರಿಯಿಂದ ಶಂಬಡೆಮನೆ ಕೊರ್ಟಮನೆ ಕೇರಿಗಳಿಗೆ ಹೋಗುವ ರಸ್ತೆ ಮೋರಿ ಕೊಚ್ಚಿಹೋಗಿದ್ದು ಇದರಿಂದಾಗಿ ಹತ್ತಾರು ಮನೆಗಳ ಸಂಪರ್ಕ ಕೊಂಡಿ ವಾಹನ ಸಂಚಾರಕ್ಕೆ ವ್ಯತ್ಯವಾಗಿದೆ.

ಎರಡು ಲಕ್ಷ ಅನುಧಾನ ನೀಡಿ ಇತ್ತೀಚೆಗಷ್ಟೆ ಈ ಮೋರಿ ನಿರ್ಮಿಸಿ ಸಂಪರ್ಕ ಕಲ್ಪಿಸಲಾಗಿತ್ತು.ನಿರ್ಮಾಣವಾಗುತ್ತಿದ್ದಂತೆಯೆ ಈ ಮೋರಿ ಕುಸಿದುಹೋಗಿದ್ದು, ಕಾಮಗಾರಿ ಕಳಪೆ ಎಂಬ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬಂದಿತ್ತು.ನಂತರ ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಲಾಗಿತ್ತು.ಈಗ ಎರಡು ಕಡೆಯ ವಾಲ್ ಮಾತ್ರ ಇದ್ದು ರಸ್ತೆಯ ಮಧ್ಯ ಭಾಗ ಕೊಚ್ಚಿಹೋಗಿದೆ.ಈ ವರ್ಷದ ನಿರಂತರ ಮಳೆಗೂ ಇಂತಹ ಘಟನೆ ಸಂಭವಿಸಿರಲಿಲ್ಲ.ಆದರೆ ಈಗ ಅಕಾಲದಲ್ಲಿ ಸುರಿದ ಭಾರೀ ಪ್ರಮಾಣದ ಮಳೆ ಇಷ್ಟು ಅನಾಹುತ ಮಾಡಿರುವುದು ನಿರ್ಮಾಣ ಕಾಮಗಾರಿಯ ಬಗ್ಗೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.