ಸುದ್ಧಿಕನ್ನಡ ವಾರ್ತೆ
Goa(Belagavi): ರಾಮನಗರದ ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ಅಸ್ತೋಲಿ ಸೇತುವೆ ಬಳಿ ಎರಡು ಭಾರಿ ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಒಂದು ಟೆಂಪೋ ಪಲ್ಟಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿತ್ತು. ಇದರಿಂದಾಗಿ ರಾತ್ರಿಯಿಂದ ಸುಮಾರು 16 ಗಂಟೆಗಳ ಕಾಲ ಹೆದ್ದಾರಿಯ ಎರಡೂ ಬದಿಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬುಧವಾರ ಬೆಳಗ್ಗೆ ಕ್ರೇನ್ ಸಹಾಯದಿಂದ ಸಿಕ್ಕಿಬಿದ್ದ ಎರಡೂ ಭಾರೀ ವಾಹನಗಳನ್ನು ಎಳೆದು ತೆಗೆದು ಮಧ್ಯಾನ್ಹದ ವೇಳೆಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಧಾರಾಕಾರ ಮಳೆಗೆ ಸಂಭವಿಸಿದ ಅಪಘಾತ…!
ರಾಮನಗರದ ಅಸ್ತೋಲಿ ಸೇತುವೆ ಬಳಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಮಂಗಳವಾರ ಸಂಜೆ 4ರ ನಂತರ ಈ ಭಾಗದಲ್ಲಿ ಜೋರು ಮಳೆ ಆರಂಭವಾದ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆ ಸಂಪೂರ್ಣ ಕೆಸರುಮಯವಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುವಾಗ ರಾತ್ರಿ 9 ಗಂಟೆ ಸುಮಾರಿಗೆ ಎರಡು ಭಾರಿ ವಾಹನಗಳು ರಸ್ತೆ ಮಧ್ಯದಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿವೆ. ಅಲ್ಲದೇ ಬೊಲೆರೋ ಟೆಂಪೋವೊಂದು ಇದೇ ಕೆಸರು ರಸ್ತೆಯಲ್ಲಿ ಪಲ್ಟಿಯಾಗಿತ್ತು, ಇದರಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಸಂಚಾರ ಸ್ಥಗಿತಗೊಂಡಿದ್ದರಿಂದ ರಸ್ತೆಯ ಇಕ್ಕೆಲಗಳಲ್ಲಿ ಕಿಲೋಮೀಟರ್ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ಟ್ರಾಫಿಕ್ ಜಾಮ್‍ನಲ್ಲಿ ಬಸ್‍ಗಳು, ಕಾರ್ಗೋ, ಟೂರಿಸ್ಟ್ ಟ್ಯಾಕ್ಸಿಗಳು ಸೇರಿದಂತೆ ಅನೇಕ ವಾಹನಗಳು ಸಿಲುಕಿಕೊಂಡಿದ್ದು, ಸುಮಾರು 16 ಗಂಟೆಗಳ ಕಾಲ ಸಂಚಾರ ವ್ಯತ್ಯಯವಾಗಿದ್ದರಿಂದ ವಾಹನ ಮಾಲೀಕರು ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಗೋವಾಕ್ಕೆ ಬರುವ ವಾಹನಗಳು ಮಾರ್ಗ ಬದಲಾವಣೆ…?
ಈ ರಸ್ತೆ ಸಂಪೂರ್ಣ ಬಂದ್ ಆಗಿದ್ದರಿಂದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಭಾಗಗಳಿಂದ ಗೋವಾ ಕಡೆಗೆ ಹೋಗುವ ಹಲವು ಬಸ್ ಗಳು ರಾಮನಗರ, ಖಾನಾಪುರ ಕಡೆಯಿಂದ ಹೆಮ್ಮಡಗಾ-ಆನಮೋಡ ಮಾರ್ಗವಾಗಿ ಗೋವಾ ಕಡೆಗೆ ತೆರಳುವಂತಾಯಿತು. ಆದರೆ ಕೆಲ ಬಸ್‍ಗಳು ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿಕೊಂಡವು. ರಾತ್ರಿ ಮಳೆಯಿಂದಾಗಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದರಿಂದ ಪೊಲೀಸರು ಸಂಚಾರ ಸುಗಮಗೊಳಿಸಲು ಯತ್ನಿಸಿದರು. ಆದರೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗದ ಕಾರಣ ಬುಧವಾರ ಬೆಳಗ್ಗೆ ಕ್ರೇನ್ ಮೂಲಕ ವಾಹನ ಹಾಗೂ ಟೆಂಪೋವನ್ನು ಪಕ್ಕಕ್ಕೆ ಎತ್ತಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.