ಸುದ್ಧಿಕನ್ನಡ ವಾರ್ತೆ
ಶಿರಸಿ:ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿದ್ದಾಪುರ ತಾಲೂಕಿನ ಲುಸಿಂಗಟನ್ ಜಲಪಾತ ಭೋರ್ಗರೆಯುತ್ತಿದೆ. ಸ್ಥಳೀಯರ ಪಾಲಿನ ಕೆಪ್ಪ ಜೋಗ, ಉಂಚಳ್ಳಿ ಜಲಪಾತವು ನವ ಯುವತಿಯಾಗಿ ದುಮ್ಮಿಕ್ಕುತ್ತಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಪ್ರಸಿದ್ಧ ನದಿ ಅಘನಾಶಿನಿ ತುಂಬಿ ಹರಿಯುತ್ತಿದೆ. ಈ ನದಿಯಿಂದ ಉಂಟಾಗುವ ಈ ಜಲಪಾತ ಮೈ ದುಂಬಿ ಧುಮುಕುವ ದೃಶ್ಯವನ್ನ ಪ್ರವಾಸಿಗರು ಸೆರೆ ಹಿಡಿಯುತ್ತಿದೆ. ಪ್ರವಾಸಿಗರ ಮೊಬೈಲ್ ಕೆಮರಾಗಳು “ಜಲಲ ಜಲಲ ಜಲಲ ಜಲ ಧಾರೆ” ಸೆರೆ ಹಿಡಿದು ವೈರಲ್ ಮಾಡಿದೆ.
ಶಿವರಾಜ್ ಕುಮಾರ್, ರಮೇಶ್, ಪ್ರೇಮಾ ನಟಿಸಿದ ನಮ್ಮೂರ ಮಂದಾರ ಹೂವೆ ಚಿತ್ರದ ಚಿತ್ರೀಕರಣ ಇದೆ ಜಲಪಾತದ ಬಳಿ ನಡೆದಿತ್ತು.
ರವಿವಾರ ಮಳೆ ಸ್ವಲ್ಪ ಇಳಿಮುಖವಾಗಿದ್ದು ಜಲಪಾತದ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಪ್ರವಾಸಿಗರು ಮೈಮರೆತರೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆಗಮಿಸುವ ಪ್ರವಾಸಿಗರು ತಮ್ಮ ಎಚ್ಚರಿಕೆಯಿಂದ ಹೆಜ್ಜೆಯಿಟ್ಟರೆ ಒಳಿತು.