ಸುದ್ದಿ ಕನ್ನಡ ವಾರ್ತೆ
. ಸಿದ್ದಾಪುರ: ಪೂಜನೀಯ ಸ್ಥಾನದಲ್ಲಿರುವ ನದಿಗಳು ನಮಗೆ ತಾಯಿ ಸಮಾನ. ಪಂಚಭೂತಗಳಲ್ಲಿ ಒಂದಾದ ನದಿಗಳನ್ನು ಪೂಜ್ಯ ಭಾವನೆಯಿಂದ ಕಾಣುವುದು ನಮ್ಮ ಸಂಸ್ಕೃತಿ. ಅಂತಹ ನದಿಗಳಿಗೆ ಅಣೆಕಟ್ಟು ನಿರ್ಮಿಸಿ ಧಕ್ಕೆ ಮಾಡುವುದನ್ನು ನಾವೆಲ್ಲರೂ ಒಗ್ಗೂಡಿ ವಿರೋಧಿಸಬೇಕು, ಎಂದು ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಕರೆ ನೀಡಿದರು.
ಮಹಾಶಿವರಾತ್ರಿಯ ಪುಣ್ಯಕಾಲದ ಪ್ರಯುಕ್ತ ಭಾನುವಾರ ತಾಲೂಕಿನ ಬಾಳೂರಿನಲ್ಲಿ ಜರುಗಿದ ಅಘನಾಶಿನಿ ಮತ್ತು ಸುರನದಿ ಸಂಗಮ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ನದಿ ಪೂಜೆ ಹಾಗೂ ಆರತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಪ್ರಸ್ತಾಪಿತ ನದಿ ತಿರುವು ಯೋಜನೆಗಳಿಂದ ಪರಿಸರಕ್ಕೆ ಮಾತ್ರವಲ್ಲದೆ, ನದಿ ನಂಬಿ ಬದುಕುತ್ತಿರುವ ಸಾವಿರಾರು ಜೀವಕುಲಕ್ಕೆ ಸಂಚಕಾರ ಬರಲಿದೆ. ನದಿಯ ಸಿಹಿನೀರು ಸಮುದ್ರ ಸೇರುವುದು ವ್ಯರ್ಥವಲ್ಲ.ಅದು ಜಲಚರಗಳ ಅಭಿವೃದ್ಧಿಗೆ ಪೂರಕವಾಗಿದೆ.ಮಲೆನಾಡು ಹಾಗೂ ಕರಾವಳಿಯ ಸಂಘಟಿತರಾಗಿ ಜೀವನದಿಗಳ ಕಟಿಬದ್ಧರಾಗಬೇಕು ಎಂದು ತಿಳಿಸಿದರು.ಮಾನ್ಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಹಾಶಿವರಾತ್ರಿಯ ಪುಣ್ಯ ಸಂದರ್ಭದಲ್ಲಿ ಸಿದ್ದಾಪುರ ತಾಲೂಕಿನ ಬಾಳೂರಿನ ಶ್ರೀ ಚನ್ನಕೇಶವ ಮತ್ತು ಸಂಗಮೇಶ್ವರ ದೇವರ ದರ್ಶನ ಪಡೆದು, ಅಘನಾಶಿನಿ ಮತ್ತು ಸುರನದಿಯ ಸಂಗಮದಲ್ಲಿ, ನಮ್ಮ ಪವಿತ್ರ ನದಿಯ ಉಳಿವಿಗಾಗಿ ಆಯೋಜಿಸಲಾಗಿದ್ದ ‘ಅಘನಾಶಿನಿ ಆರತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಂಸದರಾದ ಕಾಗೇರಿಯವರು ಮಾತನಾಡಿ, ನಮ್ಮ ನದಿಗಳು ನಮ್ಮ ಸಂಸ್ಕೃತಿಯ ತಾಯಿಬೇರುಗಳು. ಅಘನಾಶಿನಿಯಂತಹ ಪವಿತ್ರ ನದಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.ಶ್ರೀಮನ್ನೆಲೆಮಾವು ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಮಾಧವಾನಂದ ಭಾರತಿ ಮಹಾ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಅತ್ಯಂತ ಅವಿಸ್ಮರಣೀಯವಾಗಿ ಜರುಗಿತು.ಕಾರ್ಯಕ್ರಮದಲ್ಲಿ ಪ್ರಮುಖರಾದ ಉಪೇಂದ್ರ ಪೈ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
