Banner Ad

ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ಪಟ್ಟಣದ ಗ್ರಾಮದೇವಿಯರ ಜಾತ್ರೆಯು ಬುಧವಾರ ವಿದ್ಯುಕ್ತವಾಗಿ ಆರಂಭವಾಗಿದ್ದು, ಗ್ರಾಮದೇವಿಯರ ಭವ್ಯ ಮೆರವಣಿಗೆಗೆ ಅಪಾರ ಜನಸ್ತೋಮ ಸಾಕ್ಷಿಯಾಯಿತು.

Banner Ad

ಮಧ್ಯಾಹ್ನ 3.40 ಗಂಟೆಗೆ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿವಿಧಾನದೊಂದಿಗೆ ದೇವಾಲಯದಿಂದ ಮೆರವಣಿಗೆ ಆರಂಭವಾಯಿತು. ಜಾಗಟೆ ವಾದನ, ಚಂಡೆ ವಾದ್ಯ, ಛದ್ಮವೇಶ, ಯಕ್ಷವೇಶ, ಕೀಲುಕುದುರೆ ಕುಣಿತ, ಭಕ್ತರ ಜಯಘೋಷದೊಂದಿಗೆ ಮೆರವಣಿಗೆ ಸಾಗಿಬಂತು. ತಿಳಕ್ ಚೌಕ, ಪೊಲೀಸ್ ಠಾಣೆಯ ಸಮೀಪ ಗ್ರಾಮದೇವಿಯರು ಪರಸ್ಪರ ಮುಖಾಮುಖಿಯಾದಾಗ ಜನರು ಜಯಕಾರ ಮೊಳಗಿಸಿದರು.ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ರಸ್ತೆಯ ಅಂಚಿನ ಕಟ್ಟಡಗಳಲ್ಲಿ ನಿಂತ ಜನರು ಮೆರವಣಿಗೆಯನ್ನು ಕಣ್ಣುಂಬಿಸಿಕೊಂಡರು.

ಸಂಜೆ 5.20ಕ್ಕೆ ಗ್ರಾಮದೇವಿಯರು ಜಾತ್ರಾ ಮಂಟಪದ ಗದ್ದುಗೆಯಲ್ಲಿ ಆಸೀನರಾದವರು. ನಂತರ ನಾನಾ ಧಾರ್ಮಿಕ ಪೂಜಾ ವಿಧಿಗಳು ನಡೆದವು.ಭಕ್ತರು ಗ್ರಾಮದೇವಿಯರ ದರ್ಶನ ಪಡೆದು ಕೃತಾರ್ಥರಾದರು. ಅಲ್ಲಲ್ಲಿ ಜನರಿಗೆ ಪಾನಕ, ಮಜ್ಜಿಗೆಯನ್ನು ವಿತರಿಸಲಾಯಿತು.

ಗುರುವಾರ ಬೆಳಿಗ್ಗೆಯಿಂದ ಜಾತ್ರಾಮಂಟಪದಲ್ಲಿ ಗ್ರಾಮದೇವಿಯರಿಗೆ ಭಕ್ತರು ಪೂಜೆ, ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8.30 ರ ವರೆಗೆ ಪೂಜೆ, ನಾನಾ ಸೇವೆಗಳನ್ನು ಸಲ್ಲಿಸಬಹುದಾಗಿದೆ. ಜಾತ್ರಾ ಮಹೋತ್ಸವದ 9 ದಿನಗಳವರೆಗೆ ಇರಲಿದ್ದು ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

Banner Ad