ಸುದ್ದಿ ಕನ್ನಡ ವಾರ್ತೆ
ದಾಂಡೇಲಿ; ಕಾಳಿ ಹುಲಿ ಯೋಜನೆ ಮತ್ತು ಹಳಿಯಾಳ ಅರಣ್ಯ ವಿಭಾಗಳ ಮೂಲ ನಿವಾಸಿಗಳ ಜಂಟಿ ಸಭೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ವೃತ್ತ ಟಿ. ಹಿರಾಲಾರ ರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದಾಂಡೇಲಿಯ ಹಾರ್ನ್ ಬಿಲ್ ಸಭಾ ಭವನದಲ್ಲಿ ಸುದೀರ್ಘ ಮೂರು ಗಂಟೆಗಳ ಕಾಲ ನಡೆಯಿತು. ಸಭೆಯಲ್ಲಿ ಸಮಸ್ಯೆ ಒಂದೊಂದಾಗಿ ಆಲಿಸುವ ಮೂಲಕ ಪರಿಹಾರ ಸೂಚಿಸುತ್ತಾ, ಸ್ಥಳಿಯರ ಸಹಭಾಗಿತ್ವದಲ್ಲಿ ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆ ಮಾಡುವ ಅಂತಿಮ ತೀರ್ಮಾನಕ್ಕೆ ಬರಲಾಯಿತು.
ಕಾಳಿ ಹುಲಿ ಯೋಜನೆ ಮತ್ತು ಹಳಿಯಾಳ ವಿಭಾಗದಲ್ಲಿ ತಲೆತಲಾಂತರದಿಂದ ಅಧಿಭೋಗಿಸಿಕೊಂಡು ಬರುವ ಕುಮರಿ ಜಮಿನ (ರಾಗಿ ಬೇಸಾಯ) ಇದು ಜನರಿಗೆ ಸೇರಿದ್ದು, ಸಂಬಂಧಿಸಿದ ಉದ್ದೇಶದ ಸಾಗುವಳಿಗೆ ಬಳಸಲು ಅರಣ್ಯ ಇಲಾಖೆಯಿಂದ ತೊಂದರೆ ನೀಡಬಾರದೆಂದು ಅಧಿಕಾರಿಗಳಿಗೆ ಸಿ.ಸಿ.ಎಪ್ ರವರು ಆದೇಶ ನೀಡಿದರು. ಈಗಾಗಲೇ 2002 ರಲ್ಲಿ ಕುಮರಿ ಸಾಗುವಳಿದಾರರ ರೈತರು ಹಳಿಯಾಳ ಡಿ.ಎಪ್.ಓ ರವರಿಗೆ ನೀಡಿದ ಮಾಹಿತಿ ಮತ್ತು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದನ್ನು ಪರಿಗಣಿಸುವುದು ಮತ್ತು ಇತರ ರಾಜ್ಯಗಳಲ್ಲಿ ಆದ ಮಂಜೂರು ಉಲ್ಲೇಖ ಪರಿಗಣಿಸಿ ಪಹಣಿ ಮೇಲೆ ರೈತರ ಹೆಸರು ಬರುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ತೀರ್ಮಾನ ಮಾಡಲಾಯಿತು.
ವನ್ಯ ಪ್ರಾಣಿಗಳು ಮತ್ತು ಸ್ಥಳಿಯರ ಮಧ್ಯೆ ಘರ್ಷಣೆ ಹೆಚ್ಚಾಗುತ್ತಿದೆ. ಇದರಿಂದ ಕಾಡು ಪ್ರಾಣಿಗಳು ಗ್ರಾಮಕ್ಕೆ ನುಗ್ಗಿ ಬೆಳೆ ಹಾನಿ ಮತ್ತು ಜೀವ ಹಾನಿ ಮಾಡದಂತೆ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಸಿ ಎಸ್, ಆರ್ ಫಂಡ್, ಇಲಾಖೆಯ ಟೈಗರ್ ಫೌಂಡೇಶನ್ ಮತ್ತು ಇತರ ಯೋಜನೆಗಳಲ್ಲಿ.ಆನೆ ಕಂದಕ ನಿರ್ಮಾಣ , ತಂತಿ ಬೇಲಿ, ಕಲ್ಲಿನ ಗೋಡೆಗಳನ್ನು ನಿರ್ಮಿಸುವುದು, ಕಾಡು ಪ್ರಾಣಿಗಳ ಮೇಲೆ ನಿಗಾ ಇಡುವುದು. ಗೆಡ್ಡೆ ಗೆಣಸು, ಭತ್ತದ ಬೆಳೆ, ಬಾಳೆ ಹಾನಿ, ಜಾನುವಾರು ಹತ್ಯೆ ಆದರೆ ಹೆಚ್ಚಿನ ಪರಿಹಾರ ನೀಡುವುದು, ಮುಂಜಾಗ್ರತೆ ವಹಿಸುವುದು..
ಉದ್ಯೋಗ ಸೃಷ್ಟಿ ಮತ್ತು ಸ್ಥಳಿಯರ ಆದಾಯ ಹೆಚ್ಚಿಸಲು “ಸ್ವಯಂ’ ಕಾಳಿ ಹುಲಿ ಯೋಜನೆ ಎಲ್ಲಾ ವಲಯಗಳಿಗೆ ವಿಸ್ತರಣೆ ಮಾಡುವುದು. ಸ್ಥಳಿಯರಿಗೆ ಅರಣ್ಯ ಇಲಾಖೆಯಲ್ಲಿ ಮೊದಲ ಆದ್ಯತೆ ನೀಡಿ ಉದ್ಯೋಗ ನೀಡುವುದು, ಮಹಿಳೆಯರ ಉದ್ಯೋಗ ಸೃಷ್ಟಿ ಮಾಡುವುದು, ಮಕ್ಕಳ ಶಿಕ್ಷಣ ಪ್ರೋತ್ಸಾಹ ಮಾಡುವುದು. ಸ್ಥಳಿಯರ ಸಂಸ್ಕೃತಿ, ದೇವರು ಇವುಗಳ ಸಂರಕ್ಷಣೆ ಮತ್ತು ಜಾನಪದ ವಿಶ್ವವಿದ್ಯಾಲಯದ ಅಭಿವೃದ್ಧಿ ಮಾಡುವುದು.
ಕಳ್ಳಬೇಟೆ ನಿಗ್ರಹ ದಳದ ಕ್ಯಾಂಪ್ ಗಳಲ್ಲಿ ಕಾವಲುಗಾರರನ್ನು ಸ್ಥಳಿಯವಾಗಿ ನೇಮಿಸುವುದು ಮತ್ತು ಖಾಯಂಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು. ಸ್ವ ಖುಷಿ ಪ್ಯಾಕೇಜ್ ನೀಡುವ ಸಾಮಾಯಿಕ ಜಮಿನಿನ ವಾಂಟಣಿ ಮಾಡದೇ ನೀಡುವಂತಿಲ್ಲ , ಅಂತಹ ಪ್ರಕರಣಗಳಿದ್ದರೆ ಸರಿಪಡಿಸುವುದು.
ಮೂರು ತಿಂಗಳಿಗೆ ಜೊಯಿಡಾದಲ್ಲಿ ಸಭೆ.
ಅರಣ್ಯ ಇಲಾಖೆ ಮತ್ತು ಸ್ಥಳಿಯರ ಮಧ್ಯೆ ಇರುವ ಅಂತರ ಮಾತುಕತೆಯಿಂದ ಪರಿಹಾರ ಸಾಧ್ಯ ಎಂದು ಸಭೆಯಲ್ಲಿ ಗಂಭೀರ ಚರ್ಚೆಯಾಗಿ ಪ್ರತಿ ಮೂರು, ನಾಲ್ಕು ತಿಂಗಳಿಗೆ ಹಿರಿಯ ಅಧಿಕಾರಿಗಳು, ಸ್ಥಳಿಯ ರೊಂದಿಗೆ ಜೊಯಿಡಾದಲ್ಲಿ ಸಭೆ ಮಾಡಿ ಹಿಂದಿನ ಸಭೆಗಳು ಪ್ರಗತಿ ಪರಿಶೀಲಿಸುವುದು ಮತ್ತು ಸ್ಥಳಿಯದ ಸಮಸ್ಯೆ ಆಲಿಸುವ ತಿರ್ಮಾನ ಮಾಡಲಾಯಿತು. ಶುಕ್ರವಾರ ತಾಲೂಕಿನ ಇತಿಹಾಸದಲ್ಲಿ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ನಿರ್ಣಯಗಳ ಬಗ್ಗೆ ಸ್ಥಳಿಯ ಹೋರಾಟಗಾರರು ಸಮಾಧಾನ ಪಟ್ಟರು. ಹಿರಿಯ ಅಧಿಕಾರಿಗಳ ನಡೆಯ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು.
ಜೊಯಿಡಾ ಕಾವಲುಗಾರರ ಖಾತೆಗೆ ಹಣ ಹಾಕಿ
ಜೊಯಿಡಾ ವಲಯದಲ್ಲಿ ಕೆಲಸ ಮಾಡುವ ಕಾವಲುಗಾರರಿಗೆ ಮಾಸಿಕ ಹಣ ಬ್ಯಾಂಕ್ ಖಾತೆಗೆ ನೀಡುವ ಬದಲು ನೇರವಾಗಿ ಕೈಗೆ ಕಡಿಮೆ ಹಣ ನೀಡಲಾಗುತ್ತದೆ ಎಂದು ಸ್ಥಳಿಯರು ದೂರಿದಾಗ. ಈ ತಿಂಗಳಿಂದ ಅವರವರ ಬ್ಯಾಂಕ್ ಖಾತೆಗೆ ಹಣ ಹಾಕಲು ಕ್ರಮವಹಿಸುವಂತೆ ಹಳಿಯಾಳ ಡಿ ಎಪ್ ಓ ರವರಿಗೆ ಸಿ.ಸಿ.ಎಪ್ ಟಿ.ಹಿರಾಲಾಲ ರವರು ಸೂಚಿಸಿದರು.
ಸಮಸ್ಯೆ ಮಾತಾಡಿದವರು.
ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾನಡಾ ಬುಡಕಟ್ಟುಗಳ ಸಂಸ್ಕೃತಿ ಮೂಲಕ ಕಾಡಿನ ಸಂರಕ್ಷಣೆ ಮತ್ತು ಕುಮರಿ ಜಮಿನು, ಸಾಮಾಜಿಕ ಹೋರಾಟಗಾರರಾದ ಗೋಪಾಲ ಭಟ್ ಬುಡಕಟ್ಟು ಕಾಯಿದೆ 2006, ದತ್ತಾರಾಮ ದೇಸಾಯಿ ರಸ್ತೆ ಮತ್ತು ಮೂಲಭೂತ ಸೌಲಭ್ಯ, ಪ್ರಸನ್ನ ಗಾವಡಾ ಕಾಡು ಮತ್ತು ಗ್ರಾಮಜ ಸೀಮೆ, ಸುಭಾಷ ಮಾಂಜರೇಕರ ಮುಂತಾದವರು ಅರಣ್ಯ ಸಮಸ್ಯೆ ಮತ್ತು ಇಲಾಖೆ ಅಧಿಕಾರಿಗಳು ಮತ್ತು ಸ್ಥಳಿಯರ ಸಹಭಾಗಿತ್ವದಲ್ಲಿ ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಸುದೀರ್ಘ ಮಾತನಾಡಿ ಅಧಿಕಾರಿಗಳಿಗೆ ಮನಮುಟ್ಟಿಸುವ ಪ್ರಯತ್ನ ಮಾಡಿದರು.
ಸಭೆಯಲ್ಲಿ ನಿಲೇಶ್ ಸಿಂಧೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಳಿ ಹುಲಿ ಯೋಜನೆ ದಾಂಡೇಲಿ, ಪ್ರಶಾಂತ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಳಿಯಾಳ, ಎ.ಸಿ.ಎಪ್ ಎಮ್ ಎಸ್ ಕಳ್ಳಿಮಠ, ಸಂತೋಷ ಚೌವ್ಹಾಣ್. ಅಣಶಿ, ಕುಂಬಾರ ವಾಡಾ, ಗುಂದ, ಕ್ಯಾಸಲರಾಕ್, ಪಣಸೋಲಿ, ಕದ್ರಾ, ಜೊಯಿಡಾ, ಜಗಲಪೇಟ, ತಿನೈಘಾಟ ಸೇರಿದಂತೆ ಎಲ್ಲಾ ವಲಯ ಅರಣ್ಯಾಧಿಕಾರಿಗಳು, ಪ್ರಮುಖರಾದ ಕೃಷ್ಣ ಮಿರಾಶಿ, ಗುರುದತ್ತ ಮಿರಾಶಿ, ಸುನಿಲ್ ಮಿರಾಶಿ, ರಾಮಕೃಷ್ಣ ಪೆಡ್ನೇಕರ, ಚಂದ್ರಶೇಖರ ಸಾವರಕರ್, ಪ್ರಭಾಕರ ವೇಳಿಪ, ಸುನಿಲ್ ದೇಸಾಯಿ, ದಾಮೋದರ ಗೌಡ ಮುಂತಾದವರು ಇದ್ದರು.ಅಣಶಿ ಎ.ಸಿ.ಎಪ್ ಗಿರೀಶ್ ಸಂಕರಿ ಸ್ವಾಗತಿಸಿ ವಂದಿಸಿದರು.
