ಸುದ್ದಿ ಕನ್ನಡ ವಾರ್ತೆ

ಮಾಧ್ಯಮ ಪ್ರಕಟಣೆ: ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಕೊಡಿಸುವಲ್ಲಿ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ, ರೈತರ ಕೆಲಸ ಮಾಡಲು ಕಾಂಗ್ರೆಸ್ ಸಚಿವರು ಮತ್ತು ಶಾಸಕರಿಗೆ ಸಮಯವಿಲ್ಲವೇ?

 

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ನ್ಯಾಯಯುತವಾಗಿ ಈಗಾಗಲೇ ಜಮಾ ಆಗಬೇಕಾಗಿದ್ದ ಬೆಳೆ ವಿಮೆಯ ಹಣವನ್ನು ಇದುವರೆಗೂ ಸಹ ವಿಮಾ ಕಂಪನಿಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ. 2024 25 ನೇ ಸಾಲಿನ ಬೆಳೆ ವಿಮೆ ರೈತರ ಖಾತೆಗಳಿಗೆ ನವಂಬರ್ ಮೊದಲ ವಾರದಲ್ಲಿಯೇ ಜಮಾ ಆಗಬೇಕಾಗಿತ್ತು. ಆದರೆ ರಾಜ್ಯ ಸರಕಾರದ ಆಡಳಿತದ ದಿವ್ಯ ನಿರ್ಲಕ್ಷ ಮತ್ತು ಆಡಳಿತ ವೈಫಲ್ಯದಿಂದಾಗಿ ಕಳೆದ ಒಂದು ವರ್ಷಗಳಿಂದ ಆಗ್ರಹಿಸುತ್ತಿದ್ದರು ಸಹ ಗ್ರಾಮ ಪಂಚಾಯತ ಮಟ್ಟದಲ್ಲಿನ ಎ ಡಬ್ಲ್ಯೂ ಎಸ್ ಯಂತ್ರಗಳ ಸರಿಯಾದ ನಿರ್ವಹಣೆ ಇಲ್ಲದಿರುವ ಕಾರಣದಿಂದ ಮಳೆ ಮತ್ತು ಹವಾಮಾನದ ಸ್ಪಷ್ಟವಾದ ಅಂಕಿ ಅಂಶ ದಾಖಲೀಕರಣ ಆಗದಿರುವುದು ವಿಮಾ ಪರಿಹಾರ ನೀಡಬೇಕಾದ ಸಂಸ್ಥೆ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳಲು ಅನುವು ಮಾಡಿಕೊಡುವಂತಿದೆ. ಇದೇ ಸಮಸ್ಯೆ 2023 24 ರಲ್ಲಿ ಬಂದಾಗ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸರಕಾರದಿಂದ ಬಿಗುವಾದ ಆದೇಶಗಳನ್ನು ಮಾಡಿಸಿ, ರೈತ ಪರವಾದ ಏಕಾಂಗಿ ಹೋರಾಟದಿಂದ ಉತ್ತರ ಕನ್ನಡ ಜಿಲ್ಲೆಯ ಸುಮಾರು 40 ಸಾವಿರ ರೈತರಿಗೆ ವಿಮಾ ಪರಿಹಾರ ದೊರಕುವಂತೆ ಮಾಡಿಕೊಟ್ಟಿದ್ದನ್ನು ನೆನಪಿಸಿಕೊಳ್ಳುತ್ತೇನೆ.

 

ಜನವರಿ 2025ರಲ್ಲಿ ಕೇಂದ್ರ ಕೃಷಿ ಇಲಾಖೆ ರಾಜ್ಯ ಸರಕಾರಕ್ಕೆ ಮಳೆ ಮಾಪನ ಯಂತ್ರಗಳನ್ನು ಸುಸ್ಥಿತಿಯಲ್ಲಿಡುವುದಕ್ಕೆ ಸ್ಪಷ್ಟವಾದ ಆದೇಶಗಳನ್ನು ನೀಡಿತ್ತು. ಆದರೂ ಸಹ ಅದನ್ನು ಲಕ್ಷಿಸದೆ ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಆಡಳಿತದಲ್ಲಿನ ನಿರ್ಲಕ್ಷತೆಯಿಂದ ಈ ಯಂತ್ರಗಳ ನಿರ್ವಹಣೆ ಮತ್ತು ದುರಸ್ತಿಗೆ ಇದುವರೆಗೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ರಾಜ್ಯ ಸರಕಾರ ರೈತರ ಹಿತರಕ್ಷಣೆಯಲ್ಲಿ ಯಾವ ರೀತಿಯ ಧೋರಣೆ ಹೊಂದಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ. ಇದುವರೆಗೂ ಸಹ ಗ್ರಾಮ ಪಂಚಾಯತಗಳಲ್ಲಿರುವ ಈ ಯಂತ್ರಗಳ ನಿರ್ವಹಣೆಗೆ ಸೂಕ್ತ ಟೆಂಡರ್ ಕರೆದು ನಿರ್ವಹಣೆ ಮಾಡದಿರುವುದು ರಾಜ್ಯ ಸರಕಾರದ ಕರ್ತವ್ಯ ಲೋಪವೇ ಸರಿ.ಈ ಕುರಿತು ಪ್ರಯತ್ನಿಸ ಬೇಕಾಗಿದ್ದ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳು ರೈತರ ಪರವಾಗಿ ಧ್ವನಿಯತ್ತಿ, ನಿಗದಿತ ಸಮಯದಲ್ಲಿ ಕೆಲಸ ಮಾಡಲು ನಿರ್ಲಕ್ಷ ತೋರಿರುವುದು ಎದ್ದು ಕಾಣಿಸುತ್ತದೆ. ರಾಜ್ಯ ಸರಕಾರ ನಿಗದಿತವಾಗಿ ನೀಡಬೇಕಾದ ಮಳೆ ಮತ್ತು ಹವಾಮಾನದ ದತ್ತಾಂಶಗಳನ್ನು ಇನ್ಸೂರೆನ್ಸ್ ಕಂಪನಿಗಳಿಗೆ ಪೂರೈಸದೆ ಇರುವ ಕಾರಣ ಇನ್ಸೂರೆನ್ಸ್ ಕಂಪನಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕಾರಣವಾಗಿದೆ. ಇವುಗಳನ್ನು ಗಮನಿಸಿದರೆ ರಾಜ್ಯ ಸರ್ಕಾರವೇ ಕಷ್ಟದಲ್ಲಿರುವ ರೈತರಿಗೆ ಬರೆ ಎಳೆದು ಇನ್ಸೂರೆನ್ಸ್ ಕಂಪನಿಗಳ ಹಿತ ರಕ್ಷಣೆಗೆ ಒಳ ಒಪ್ಪಂದ ಮಾಡಿಕೊಂಡಿದೆಯೋ ಎಂಬಂತೆ ಭಾಸವಾಗುತ್ತಿದೆ. ಇವೆಲ್ಲವುಗಳ ನಡುವೆಯೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಲ ಕಾಲಕ್ಕೆ ಕೇಂದ್ರ ಸರಕಾರದಿಂದ ಅಗತ್ಯ ನೆರವು ನೀಡಿ ರಾಜ್ಯ ಸರಕಾರಕ್ಕೆ ರೈತರ ಹಿತರಕ್ಷಣೆ ಕುರಿತು ಕಾರ್ಯ ಪ್ರವೃತ್ತರಾಗಲು ಸೂಕ್ತ ನಿರ್ದೇಶನ ಮತ್ತು ಕ್ರಮಗಳಿಗೆ ಆಗ್ರಹಿಸುತ್ತಿದ್ದಾರೆ.

 

ಜುಲೈ 2025 ರಲ್ಲಿ ಈ ಕುರಿತು ಸಂಸದರು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರವರಿಗೆ ಪತ್ರ ಬರೆದು ವಾಸ್ತವಿಕ ಸ್ಥಿತಿಗಳನ್ನು ತಿಳಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಮಾನ್ಯ ಕೇಂದ್ರ ಕೃಷಿ ಸಚಿವರು ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಕುರಿತು ವಿಶೇಷ ಗಮನಹರಿಸಿ ರೈತರ ಹಿತರಕ್ಷಣೆಗೆ ಮುಂದಾಗಲು ಕೋರಿಕೊಂಡಿದ್ದು ಇತ್ತು. ಅಲ್ಲದೆ ರಾಜ್ಯ ಸರಕಾರಕ್ಕೆ ತಕ್ಷಣದಲ್ಲಿ ಕೇಂದ್ರ ಕೃಷಿ ಸಚಿವರು ಬೆಳೆ ವಿಮೆ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸ್ಪಷ್ಟವಾದ ನಿರ್ದೇಶನ ನೀಡಿರುತ್ತಾರೆ. ಆದರೆ ರಾಜ್ಯ ಸರಕಾರ ರೈತರ ಹಿತ ರಕ್ಷಣೆಗೆ ಮುಂದಾಗದೆ ಈ ವಿಷಯವನ್ನು ಸಂಪೂರ್ಣ ನಿರ್ಲಕ್ಷಿಸಿರುವುದು ಇಲ್ಲಿ ಎದ್ದು ಕಾಣಿಸುತ್ತದೆ. ಕೇಂದ್ರ ಕೃಷಿ ಸಚಿವರು ಯಾವುದೇ ಸಂದರ್ಭದಲ್ಲಿ ರೈತರ ಹಿತ ರಕ್ಷಣೆ ಮಾಡಲು ಕೇಂದ್ರ ಸರಕಾರ ಬದ್ಧವಾಗಿದೆ ಮತ್ತು ಆ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡುತ್ತದೆ ಮತ್ತು ಈ ಕುರಿತು ಸಂಸದ ಕಾಗೇರಿ ಅವರ ವಿಶೇಷ ಪ್ರಯತ್ನ ಶ್ಲಾಘನೀಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ 3/11/ 2025 ರಂದು ಪತ್ರ ಬರೆದು ತಿಳಿಸಿರುತ್ತಾರೆ. ಕಳೆದ ಸಾಲಿನಲ್ಲಿಯೂ ಸಹ ವಿಮಾ ಕಂಪನಿ ರಾಜ್ಯ ಸರಕಾರದ ನಿರ್ಲಕ್ಷದಿಂದ ಹಣ ನೀಡಲು ನಿರಾಕರಿಸಿದಾಗ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ರೈತರ ಖಾತೆಗೆ ಹಣ ಜಮಾ ಮಾಡಿಸಿದ್ದಕ್ಕೆ ಮತ್ತು ಈಗಲೂ ಸಹ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನ ಮತ್ತು ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ರವರನ್ನು ಅಭಿನಂದಿಸುತ್ತೇವೆ. ಸಂಸದರು ರೈತರಿಗೆ ವಿಮೆ ಹಣವನ್ನು ಜಮಾ ಮಾಡಿಸಲು ತಮ್ಮ ಪ್ರಯತ್ನ ಮುಂದುವರಿಸಿ ಅಕ್ಟೋಬರ್ 2025ರಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನು ಕೂಡ ಬೇಟೆಯಾಗಿ ವಿಮೆ ಹಣವನ್ನು ತಕ್ಷಣ ರೈತರಿಗೆ ಕೊಡಿಸಲು ಬೇಕಾದ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದು ಇತ್ತು. ಆದರೂ ಸಹ ಇದುವರೆಗೂ ರೈತರಿಗೆ ನ್ಯಾಯಯುತವಾಗಿ ದೊರಕಬೇಕಾದ ಹವಾಮಾನ ಆಧಾರಿತ ಬೆಳೆ ವಿಮೆ ಮತ್ತು ಫಸಲ್ ಭೀಮಾ ಯೋಜನೆಯ ಬೆಳೆ ವಿಮೆಯ ಮೊತ್ತ ರೈತರಿಗೆ ತಲುಪಿಲ್ಲ. ಕೇವಲ ತಮ್ಮ ಅಧಿಕಾರದ ಸ್ಥಾನದ ಚಿಂತೆಯಲ್ಲಿರುವ ರಾಜ್ಯ ಸರಕಾರಕ್ಕೆ ಮತ್ತು ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ರೈತರ ಕುರಿತಾದ ಅವರ ನಿರ್ಲಕ್ಷ ಧೋರಣೆ ಜನಜನಿತವಾಗಿದೆ. ರಾಜ್ಯ ಸರಕಾರದ ಈ ನಡೆಯಿಂದ ವಿಮಾ ಕಂಪನಿ ಹಣ ನೀಡುವುದನ್ನು ತಪ್ಪಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗುವಂತಾಗಲು ರಾಜ್ಯ ಸರ್ಕಾರವೇ ಕಾರಣವಾಗುವಂತಿದೆ. ರೈತರ ಹಿತಕ್ಕಾಗಿರುವ ಕೇಂದ್ರ ಸರಕಾರದ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾದ ರಾಜ್ಯ ಸರಕಾರ ತನ್ನ ನಿರ್ಲಕ್ಷದಿಂದ ರೈತರ ಹಿತವನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ಸೋತಿದೆ. ಜನ ಹಿತವನ್ನು ಮರೆತಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಲಕ್ಷ ಧೋರಣೆ ಇದಕ್ಕೆಲ್ಲಾ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಅಜಮಾಸು ನೂರು ಕೋಟಿಗಿಂತಲೂ ಹೆಚ್ಚಿನ ವಿಮಾ ಹಣ ಜಮಾ ಆಗಬೇಕಾಗಿದ್ದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳು ತಮ್ಮ ಜವಾಬ್ದಾರಿಯನ್ನು ನೆನಪಿಸಿಕೊಂಡು, ಧ್ವನಿಯತ್ತಿ ಡಿಸೆಂಬರ್ 15ರೊಳಗಾಗಿ ರೈತರಿಗೆ ಬೆಳೆವಿಮೆ ಮೊತ್ತವನ್ನು ಬಿಡುಗಡೆ ಮಾಡಿಸಲಿ. ಉಳಿದ ವಿಚಾರಗಳಲ್ಲಿ ಬಿಜೆಪಿ ಕುರಿತು ಮಾತನಾಡುವ ಕಾಂಗ್ರೆಸ್ ನಾಯಕರು ಜನರಿಗೆ ಬೆಳೆ ವಿಮೆಯನ್ನು ಕೊಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೋ ಹೇಗೆ?

ಎಷ್ಟು ದಿವಸದಲ್ಲಿ ರೈತರ ಖಾತೆಗಳಿಗೆ ಬೆಳೆ ವಿಮೆ ಹಣವನ್ನು ಜಮಾ ಮಾಡಿಸುತ್ತೇವೆ ಎನ್ನುವುದನ್ನು ರೈತರಿಗೆ ತಿಳಿಸಲಿ. ರಾಜ್ಯ ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ತಕ್ಷಣ ಬೆಳೆ ವಿಮೆಯನ್ನು ಬಿಡುಗಡೆ ಮಾಡಿಸದಿದ್ದಲ್ಲಿ ಭಾರತೀಯ ಜನತಾ ಪಾರ್ಟಿ ಎಲ್ಲ ರೈತರ ಹಿತ ರಕ್ಷಣೆಯ ದೃಷ್ಟಿಯಿಂದ ಬೀದಿಗೆಳಿದು ಪ್ರತಿಭಟನೆ ಯನ್ನು ಕೈಗೊಳ್ಳಬೇಕಾಗುತ್ತದೆ. ಸದಾನಂದ ಭಟ್ ಜಿಲ್ಲಾ ವಕ್ತಾರರು, ಭಾರತೀಯ ಜನತಾ ಪಾರ್ಟಿ, ಉತ್ತರ ಕನ್ನಡ