Banner Ad

ಸುದ್ದಿ ಕನ್ನಡ ವಾರ್ತೆ
​ಕುಮಟಾ:ತಾಲೂಕಿನ ಕೋಡ್ಕಣಿ ಖಂಡಗಾರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನೋವಾ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

​ಪುುತ್ತೂರಿನಿಂದ ಗೋಕರ್ಣಕ್ಕೆ ಏಳು ಮಂದಿ ಪ್ರಯಾಣಿಸುತ್ತಿದ್ದ ಇನೋವಾ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಇದೇ ವೇಳೆ ಕುಮಟಾ ಕಡೆಯಿಂದ ಖಂಡಗಾರದತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವೆಲ್ಕಮ್ ಹೋಟೆಲ್ ಬಳಿ ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿಯಾಗಿದೆ.

Banner Ad

​ಅಪಘಾತದಲ್ಲಿ ಪುತ್ತೂರು ಮೂಲದ ಚಂದ್ರಕಾಂತ ಟಿ.ಎಚ್. (34), ಅಕ್ಷರಿ (12), ಸಾವಿತ್ರಿ (47), ಎಂ. ಅವಿನಾಶ್ (18), ಧನಶ್ರೀ (26) ಹಾಗೂ ಕೀರ್ತನ (20) ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಇನೋವಾ ಕಾರಿನ ಮುಂಭಾಗಕ್ಕೆ ಹೆಚ್ಚಿನ ಹಾನಿಯಾಗಿದೆ.

ಗಾಯಾಳುಗಳನ್ನು ಕೂಡಲೇ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯ ಮಾಹಿತಿ ತಿಳಿದು ಕುಮಟಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Banner Ad