ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಭಾದ್ರಪದ ಶುಕ್ಲಪಕ್ಷದ ಚತುರ್ಥಿಯ ದಿನದಂದು ಆರಂಭವಾದ ಗಣೇಶ ಚತುರ್ಥಿಯ ಹಬ್ಬವು ತಾಲೂಕಿನಾದ್ಯಂತ ಸಡಗರ,ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದೆ.
ಹಬ್ಬದ ಒಂದು ವಾರದ ಮುಂಚೆ ಪೇಟೆ,ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ನಿರ್ಮಾಣವಾದ ಝಗಮಗಿಸುವ ಬೆಳಕಿನಿಂದ ಅಲಂಕೃತಗೊಂಡ ಸುಂದರವಾದ ಮಂಟಪದಲ್ಲಿ ಪೇಟೆಯಲ್ಲಿ ಹಾಗೂ ಗ್ರಾಮೀಣ ಭಾಗದ ನುರಿತ ಕಲಾವಿದರಿಂದ ಕೈ ಕುಸರಿಯ ಮೂಲಕ ಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹವನ್ನು ಸಾಂಪ್ರದಾಯಿಕ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿ ಹಣ್ಣು ಕಾಯಿ,ಪುಷ್ಪಗಳಿಂದ,ಆರತಿ, ಭಜನೆ,ಪುಗುಡಿ,ಗುಮಟೆ ಪಾಂಗ್ ಇತ್ಯಾದಿಗಳಿಂದ ಪೂಜಾ ಸೇವೆಯನ್ನು ಸಲ್ಲಿಸಿ,ತಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತೆ ಶೃದ್ಧಾ ಭಕ್ತಿಯಿಂದ ಬೇಡಿಕೊಂಡು, ಮೋದಕ ಸೇರಿದಂತೆ ವಿವಿಧ ಬಗೆಯ ಗಣೇಶ ದೇವರಿಗೆ ಇಷ್ಟವಾದ ತಿಂಡಿಗಳ ಭೋಜನ ತಯಾರಿಸಿ ನೈವೇದ್ಯ ಮಾಡಿ,ಪಂಚಕಜ್ಜಾಯ ಪ್ರಸಾದ,ತೀರ್ಥ ವಿತರಣೆ ಮಾಡಿ ಕುಟುಂಬದ ಹಾಗೂ ನೆರೆಹೊರೆಯವರ,ನೆಂಟರಿಸ್ಟರ ಜೊತೆ ಭೋಜನದ ಸವಿಯನ್ನು ಸವಿಯುತ್ತಿದ್ದಾರೆ.
ಸಾರ್ವಜನಿಕ ಗಣೇಶೊತ್ಸವಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ,ಯಕ್ಷಗಾನ,ತಾಳಮದ್ದಲೆ,ಭರತನಾಟ್ಯ,ಕಿರ್ತನೆ,ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳ ಆಯೋಜನೆ ಮುಂದುವರೆದಿವೆ. ಗ್ರಾಮೀಣ ಪ್ರದೇಶದಲ್ಲಿ ಒಂದೂವರೆ ದಿನದ ಗಣೇಶ ದೇವರ ಮೂರ್ತಿಗಳನ್ನು ತಮ್ಮ ಶಕ್ತಿಯಾನುಸಾರ ಶ್ರದ್ಧಾ ಭಕ್ತಿಯಿಂದ ಸೇವೆಯನ್ನು ಮಾಡಿ ಸಡಗರ ಸಂಭ್ರಮದಿಂದ ಸಾಂಪ್ರದಾಯಿಕ ವಾದ್ಯಗಳ ಜೊತೆ ಹೆಜ್ಜೆ ಹಾಕಿ ಗಣಪತಿ ಬಪ್ಪಾ ಮೋರಯಾ,ಪುಡಚ್ಯಾ ವರ್ಷಿ ಲವಕರ್ ಯಾ ಎಂಬ ಘೋಷಣೆಯ ಮೂಲಕ ವಿಸರ್ಜನೆ ಮಾಡಲಾಯಿತು. ವರುಣರಾಯನು ಹಬ್ಬದ ಸಂದರ್ಭದಲ್ಲಿ ಇಲ್ಲದಿರುವುದು ಹಬ್ಬದ ಉತ್ಸಾಹ ಹೆಚ್ಚಿಸಿದೆ. ಇದೇ ರೀತಿಯಾಗಿ ಸುಮಾರು 11 ದಿನಗಳ ಕಾಲ ಹಬ್ಬದ ವಾತಾವರಣ ಮುಂದುವರಿಯಲಿದೆ.
