ಸುದ್ದಿ ಕನ್ನಡ ವಾರ್ತೆ
​ಶಿರಸಿ: ಗಡಿಯಲ್ಲಿ ಬಂದೂಕು ಹಿಡಿದು ದೇಶ ಕಾಯುತ್ತಿರುವ ಯೋಧರ ಆರೋಗ್ಯ, ಸುರಕ್ಷತೆ ಹಾಗು ಕ್ಷೇಮಕ್ಕಾಗಿ ತಾಲೂಕಿನ ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ 8 ಲಕ್ಷ ತುಳಸಿ ದಳಗಳಿಂದ ವಿಶೇಷ ಅರ್ಚನೆ ನಡೆಯಲಿದೆ.

 

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆ. 4ರಂದು ಶ್ರೀ ಮಠದಲ್ಲಿ 8 ಲಕ್ಷ ತುಳಸಿ ದಳಗಳನ್ನು ಶ್ರೀಕೃಷ್ಣನಿಗೆ ಅರ್ಪಿಸಿ ದೇಶದ ಎಲ್ಲ ಯೋಧರ ಆರೋಗ್ಯ, ರಕ್ಷಣೆ ಮತ್ತು ಬಲವರ್ಧನೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇದು ಜರುಗಲಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಶ್ರೀಗಳ ಸಂಕಲ್ಪದಂತೆ ಆರಂಭವಾದ ಈ ತುಳಸಿ ಅರ್ಚನೆ ಇದೀಗ 27ನೇ ವರ್ಷಕ್ಕೆ ಕಾಲಿಟ್ಟಿದೆ.

ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಕ್ಷೇಮಕ್ಕಾಗಿ ಪ್ರತಿವರ್ಷ ನಡೆಯುತ್ತಿರುವ ಈ ಧಾರ್ಮಿಕ ಸಂಕಲ್ಪ ವಿಶೇಷ ಮಹತ್ವ ಪಡೆದಿದೆ. ಸೆ. 4ರಂದು ಬೆಳಗಿನಿಂದಲೇ ಮಠದಲ್ಲಿ ತುಳಸಿ ಅರ್ಚನೆ, ವಿಶೇಷ ಪೂಜೆ ನಡೆದು ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ಜರುಗಲಿದೆ. ಅರ್ಚನೆಗೆ ಭಕ್ತರೂ ಪಾಲ್ಗೊಳ್ಳಲು ಅವಕಾಶವಿದ್ದು, ತಮ್ಮ ಮನೆಗಳ ಸುತ್ತಮುತ್ತಲಿನ ತುಳಸಿ ಗಿಡಗಳಿಂದ ದಳಗಳನ್ನು ಸಂಗ್ರಹಿಸಿ ಸೆ. 4ರಂದು ಅಥವಾ ಅದಕ್ಕೂ ಮುನ್ನ ಶ್ರೀ ಮಠಕ್ಕೆ ತಲುಪಿಸುವಂತೆ ಸ್ವರ್ಣವಲ್ಲಿ ಮಠಕ್ಕೆ ತಲುಪಿಸಿಯೂ ನೇರವಾಗಬಹುದಾಗಿದೆ ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.