Banner Ad

ಸುದ್ದಿ ಕನ್ನಡ ವಾರ್ತೆ
​ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಒಂದು ಮುಳುಗಡೆಯಾದ ಪರಿಣಾಮ, ಅದರಲ್ಲಿದ್ದ 25 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ರವಿವಾರ ನಸುಕಿನ ವೇಳೆ ಅಂಜದೀಪ್ ದ್ವೀಪದ ಸಮೀಪ ನಡೆದಿದೆ.

​ಬೆಳಂಬಾರ ಮೂಲದ ನೀಲಕಂಠ ಖಾರವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಅವಘಡಕ್ಕೀಡಾಗಿ ಮುಳುಗಡೆಯಾಗಿದೆ. ಈ ವೇಳೆ ಬೋಟ್‌ನಲ್ಲಿದ್ದ 25 ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ತಕ್ಷಣವೇ ಸಮೀಪದಲ್ಲಿದ್ದ ಐದು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಎಲ್ಲ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Banner Ad

​ಮುಳುಗಡೆಯಾಗುತ್ತಿದ್ದ ‘ಶ್ರೀ ಮಾತಾ’ ಬೋಟ್ ಅನ್ನು ಉಳಿಸಿಕೊಳ್ಳುವ ಪ್ರಯತ್ನವೂ ಮುಂದುವರಿದಿದೆ. ಇತರೆ ಬೋಟ್‌ಗಳ ಸಹಾಯದಿಂದ ಹಗ್ಗ ಕಟ್ಟಿ ಬೋಟ್ ಅನ್ನು ರಕ್ಷಿಸುವ ಕಾರ್ಯ ನಡೆಸಲಾಗಿದೆ. ಘಟನೆಯಿಂದ ಬೋಟ್ ಹಾಗೂ ಮೀನುಗಾರಿಕಾ ಪರಿಕರಗಳಿಗೆ ಸೇರಿ ಸುಮಾರು 70 ಲಕ್ಷ ರೂ. ಗೂ ಅಧಿಕ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

​ಮೂರನೇ ಬೋಟ್‌ಗೂ ಅವಘಡ: ಸ್ಥಳೀಯರ ಮಾಹಿತಿ ಪ್ರಕಾರ, ನೀಲಕಂಠ ಖಾರ್ವಿ ಅವರ ಮೊದಲ ಬೋಟ್ ಕೂಡ ಈ ಹಿಂದೆ ಅವಘಡಕ್ಕೀಡಾಗಿ ಹಾನಿಗೊಳಗಾಗಿತ್ತು. ಬಳಿಕ ಖರೀದಿಸಿದ್ದ ಎರಡನೇ ಬೋಟ್ ಕೂಡ ಹಾನಿಗೀಡಾಗಿತ್ತು. ಇದೀಗ ಮೂರನೇ ಬೋಟ್ ಕೂಡ ಅವಘಡಕ್ಕೀಡಾಗಿರುವುದು ಕುಟುಂಬಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟ ತಂದಿದೆ.

​ಪದೇಪದೇ ಬೋಟ್‌ಗಳು ಅವಘಡಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರ ಕುಟುಂಬಕ್ಕೆ ಭಾರಿ ನಷ್ಟವಾಗಿದೆ. ಸರಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.
​ಘಟನೆಯಿಂದ ಮೀನುಗಾರ ಸಮುದಾಯದಲ್ಲಿ ಆತಂಕ ಮೂಡಿದ್ದು, ಬೋಟ್ ಮುಳುಗಡೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

Banner Ad