ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಳಗದ್ದೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮನೆಯೊಂದರ ಮೇಲೆ ಮರದ ಟೊಂಗೆ ಮುರಿದು ಬಿದ್ದು ಹಾನಿಯಾಗಿರುವ ಘಟನೆ ರಾತ್ರಿ ಸಂಭವಿಸಿದೆ.
ಇಲ್ಲಿನ ನಿವಾಸಿ ಪಾರ್ವತಿ ಶೇಖರ ಪಟಗಾರ್ ಎಂಬುವವರ ಮನೆಯವರೆಲ್ಲ ಊಟ ಮುಗಿಸಿ ಮಲಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಮನೆಯವರು ತಕ್ಷಣವೇ ಎಚ್ಚರಗೊಂಡು ಆತಂಕಕ್ಕೊಳಗಾಗಿದ್ದಾರೆ. ಮರದ ದಪ್ಪನೆಯ ಟೊಂಗೆಯು ನೇರವಾಗಿ ಅಡುಗೆ ಕೋಣೆಯ ಮೇಲ್ಛಾವಣಿಯ ಮೇಲೆ ಬಿದ್ದ ಪರಿಣಾಮ ಸುಮಾರು 50ಕ್ಕೂ ಹೆಚ್ಚು ಹಂಚುಗಳು ಪುಡಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆದರೆ, ಇದೇ ಮನೆಯ ಪಕ್ಕದಲ್ಲಿರುವ ದೊಡ್ಡ ಕಾಸರಕನ ಮರವು ಪೂರ್ಣ ಪ್ರಮಾಣದಲ್ಲಿ ಮನೆಯ ಕಡೆಗೇ ವಾಲುತ್ತ ನಿಂತಿರುವುದು ನಿವಾಸಿಗಳ ನೆಮ್ಮದಿ ಕೆಡಿಸಿದ್ದು, ಆತಂಕದಲ್ಲಿ ರಾತ್ರಿ ಕಳೆಯುವಂತಾಗಿದೆ. ಈ ಮರವನ್ನು ತಕ್ಷಣವೇ ತೆರವುಗೊಳಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
