ಸುದ್ದಿ ಕನ್ನಡ ವಾರ್ತೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನರ ದೀರ್ಘಕಾಲದ ಬೇಡಿಕೆಯಾಗಿದ್ದ ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಸೌಲಭ್ಯ ಇದೀಗ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಆಸ್ಪತ್ರೆಯಲ್ಲಿ ಲಭ್ಯವಾಗಲಿದ್ದು, ಸುಮಾರು 11 ಕೋಟಿ ರೂ. ಮೌಲ್ಯದ ಅತ್ಯಾಧುನಿಕ ಎಂಆರ್‌ಐ ಯಂತ್ರ ಆಸ್ಪತ್ರೆಯನ್ನು ತಲುಪಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಖರೀದಿಸಲಾದ ಈ ಬೃಹತ್ ಯಂತ್ರವನ್ನು ವಿಶೇಷ ವ್ಯವಸ್ಥೆಯ ಮೂಲಕ ಆಸ್ಪತ್ರೆಗೆ ಒಳಗೆ ಸಾಗಿಸಲಾಗಿದ್ದು, ಯಂತ್ರ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಇನ್ನೊಂದು ತಿಂಗಳೊಳಗೆ ಸಾರ್ವಜನಿಕರ ಬಳಕೆಗೆ ಸೌಲಭ್ಯ ಆರಂಭವಾಗುವ ನಿರೀಕ್ಷೆಯಿದ್ದು, ತಂತ್ರಜ್ಞರ ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದೆ.
ಇಲ್ಲಿಯವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ವಲಯದಲ್ಲಿ ಎಂಆರ್‌ಐ ಸೌಲಭ್ಯ ಇರದ ಕಾರಣ ರೋಗಿಗಳು ಉಡುಪಿ, ಮಂಗಳೂರು, ಹುಬ್ಬಳ್ಳಿ ಹಾಗೂ ಗೋವಾ ಸೇರಿದಂತೆ ಹೊರ ಜಿಲ್ಲೆಗಳ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತಿತ್ತು. ಇದರಿಂದ ಸಮಯ ಹಾಗೂ ಹಣದ ಹೆಚ್ಚುವರಿ ಹೊರೆ ಎದುರಾಗುತ್ತಿತ್ತು.
ಹೊಸ ಎಂಆರ್‌ಐ ಯಂತ್ರ ಕಾರ್ಯಾರಂಭವಾದ ಬಳಿಕ ಅಪಘಾತ, ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ತ್ವರಿತ ಮತ್ತು ನಿಖರ ಪತ್ತೆಗೆ ನೆರವಾಗಲಿದೆ. ಇದರಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯುವ ಸಾಧ್ಯತೆ ಹೆಚ್ಚಲಿದ್ದು, ಅನೇಕ ರೋಗಿಗಳ ಜೀವ ರಕ್ಷಣೆಗೆ ಸಹಕಾರಿಯಾಗಲಿದೆ
ಖಾಸಗಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಪರೀಕ್ಷೆಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿರುವ ಸಂದರ್ಭದಲ್ಲಿ, ಕ್ರಿಮ್ಸ್‌ನಲ್ಲಿ ಕಡಿಮೆ ದರದಲ್ಲಿ ಅಥವಾ ಸರ್ಕಾರಿ ಯೋಜನೆಗಳಡಿ ಉಚಿತವಾಗಿ ಸೇವೆ ದೊರೆಯುವ ನಿರೀಕ್ಷೆಯಿದ್ದು, ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಇದು ಮಹತ್ತರ ನೆರವಾಗಲಿದೆ.
ಎಂಆರ್‌ಐ ಯಂತ್ರದ ಕೊಠಡಿಯನ್ನು ವಿಶೇಷ ಸುರಕ್ಷತಾ ಮಾನದಂಡಗಳೊಂದಿಗೆ ನಿರ್ಮಿಸಲಾಗುತ್ತಿದ್ದು, ಶಕ್ತಿಶಾಲಿ ಕಾಂತೀಯ ಕ್ಷೇತ್ರ ಮತ್ತು ರೇಡಿಯೋ ತರಂಗಗಳನ್ನು ಬಳಸುವ ಕಾರಣ ವಿಶೇಷ ಶೀಲ್ಡಿಂಗ್ ವ್ಯವಸ್ಥೆ ಅಳವಡಿಸಲಾಗುತ್ತದೆ. ಜೊತೆಗೆ ಯಂತ್ರದ ಕಾರ್ಯಕ್ಷಮತೆ ಕಾಪಾಡಲು ನಿರಂತರ ತಾಪಮಾನ ನಿಯಂತ್ರಣ ವ್ಯವಸ್ಥೆಯೂ ಇರಲಿದೆ.
ಅತ್ಯಂತ ಶಕ್ತಿಯುತ ಕಾಂತೀಯ ಗುಣ ಹೊಂದಿರುವ ಈ ಯಂತ್ರದ ಸುತ್ತಮುತ್ತ ಲೋಹದ ವಸ್ತುಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಇರಲಿದ್ದು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದ್ದು, ಜಿಲ್ಲೆಯ ಜನತೆಗೆ ಗುಣಮಟ್ಟದ ವೈದ್ಯಕೀಯ ಸೇವೆ ಮತ್ತಷ್ಟು ಸಮೀಪವಾಗಲಿದೆ.
