Banner Ad

ಸುದ್ದಿ ಕನ್ನಡ ವಾರ್ತೆ
​ಹೊನ್ನಾವರ: ತಾಲೂಕಿನ ಬಂಗಾರಮಕ್ಕಿಯ ಶ್ರೀವೀರಾಂಜನೇಯ ಕ್ಷೇತ್ರದಲ್ಲಿ ಏಪ್ರಿಲ್ 1 ಮತ್ತು 2 ರಂದು ಶ್ರೀವೀರಾಂಜನೇಯ ದೇವರ ಪುಷ್ಪರಥೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ. ಮಾರ್ಚ್ 27ರಿಂದ ನಡೆಯುತ್ತಿರುವ ‘ಸಂಸ್ಕೃತಿ ಕುಂಭ – ಮಲೆನಾಡು ಉತ್ಸವ 2026ರ ಅಂತಿಮ ಘಟ್ಟವಾಗಿ ಭವ್ಯ ರಥೋತ್ಸವ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆಯುವ ನಿರೀಕ್ಷೆ ಇದೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿ ಪ್ರಕಟಣೆ ತಿಳಿಸಿದೆ.

​ಅಲ್ಲದೆ ಏಪ್ರಿಲ್ 1 ರಂದು, ಬೆಳಿಗ್ಗೆ 9:30ಕ್ಕೆ ಪ್ರಾಚೀನ ಆರೋಗ್ಯ ಪರಂಪರ ವೈದ್ಯ ಸಂಗಮ ನಡೆಯಲಿದ್ದು 200ಕ್ಕೂ ಹೆಚ್ಚು ವಿವಿಧ ಪದ್ಧತಿಗಳ ವೈದ್ಯ ಪರಿಣಿತರು ಆಗಮಿಸಲಿದ್ದಾರೆ. ಏಪ್ರಿಲ್ 1ರಂದು ಮಧ್ಯಾಹ್ನ 2 ಗಂಟೆಗೆ ರೈತೋತ್ಸವ ಕಾರ್ಯಕ್ರಮ ನಡೆಯಲಿದ್ದು, ಕೃಷಿ, ತೋಟಗಾರಿಕೆ ಬೆಳೆಗಳು, ಫಲಪುಷ್ಪ ಹಾಗೂ ಸಾವಯವ ಕೃಷಿ ಪದಾರ್ಥಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ವಿಚಾರ ಗೋಷ್ಠಿ ಆಯೋಜಿಸಲಾಗಿದೆ.

Banner Ad

​ಏಪ್ರಿಲ್ 1ರಂದು, ಬೆಳಿಗ್ಗೆ 5:30 ಗಂಟೆಗೆ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ದೇವಸ್ಥಾನ ಹಾಗೂ ಯಾಗಶಾಲೆಯಲ್ಲಿ ಪೂಜೆಗಳು ಜರುಗಲಿವೆ. ಸಂಜೆ 5 ಗಂಟೆಗೆ ಪುಷ್ಪರಥೋತ್ಸವ ಮತ್ತು ತೊಟ್ಟಿಲೋತ್ಸವ ನೆರವೇರಲಿದೆ. ಏಪ್ರಿಲ್ 2ರಂದು ಮಧ್ಯಾಹ್ನ 2 ಗಂಟೆಗೆ ರಥೋತ್ಸವ ನಡೆಯಲಿದೆ. ಸಂಜೆ 5.30 ಗಂಟೆಗೆ ಸಭಾ ಭವನದಲ್ಲಿ ಸೀತಾ ಕಲ್ಯಾಣೋತ್ಸವ ಹಾಗೂ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ.

​ಏಪ್ರಿಲ್ 2ರಂದು ಬೆಳಿಗ್ಗೆ 9:30 ಗಂಟೆಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ದಾವಣಗೆರೆಯ ಎಸ್ ಎಸ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ 30ಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಪ್ರತಿವರ್ಷ ಚೈತ್ರ ಮಾಸದ ಹುಣ್ಣಿಮೆಯಂದು (ಏಪ್ರಿಲ್‌ನಲ್ಲಿ) ಭವ್ಯವಾದ ಬ್ರಹ್ಮರಥೋತ್ಸವ ನಡೆಯುತ್ತದೆ. ಹನುಮ ಜಯಂತಿ ಮತ್ತು ರಾಮನವಮಿಯ ಸಂದರ್ಭದಲ್ಲಿ, 10-12 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪುಷ್ಪ ರಥೋತ್ಸವ ಮತ್ತು ಸೀತಾ ಕಲ್ಯಾಣೋತ್ಸವಗಳು ಇಲ್ಲಿನ ವಿಶೇಷ. ಬಂಗಾರಮಕ್ಕಿ ವೀರಾಂಜನೇಯ ರಥೋತ್ಸವದ ಪ್ರಮುಖಾಂಶಗಳು:
ಸ್ಥಳ: ಶ್ರೀ ಕ್ಷೇತ್ರ ಬಂಗಾರಮಕ್ಕಿ (ಹೊನ್ನಾವರ, ಉತ್ತರ ಕನ್ನಡ).
ಕಾಲ: ಪ್ರತಿ ವರ್ಷ ಚೈತ್ರ ಶುದ್ಧ ಹುಣ್ಣಿಮೆಯಂದು ಹನುಮ ಜಯಂತಿಯ ಸಂದರ್ಭದಲ್ಲಿ.
ಕಾರ್ಯಕ್ರಮಗಳು:ರಾಮನವಮಿಯಿಂದ ಹುಣ್ಣಿಮೆಯವರೆಗೆ ಶ್ರೀರಾಮತಾರಕ ಹವನ, ಆಂಜನೇಯ ಮೂಲಮಂತ್ರ ಹವನ, ಸುಂದರಕಾಂಡ ಪಾರಾಯಣ, ಮತ್ತು ಹನುಮ ಜಯಂತಿಯಂದು ಸತ್ಯಮಾರುತಿ ವೃತ ನಡೆಯುತ್ತದೆ.

ಉತ್ಸವ: ಪುಷ್ಪಾಲಂಕೃತ ರಥದ ಮೆರವಣಿಗೆ (ಪುಷ್ಪ ರಥೋತ್ಸವ), ನಂತರ ಬ್ರಹ್ಮರಥೋತ್ಸವ ಮತ್ತು ಸೀತಾ ಕಲ್ಯಾಣೋತ್ಸವ ವೈಭವದಿಂದ ನಡೆಯುತ್ತದೆ. ವಿಶೇಷತೆ: ಇಲ್ಲಿನ ಆಂಜನೇಯ ಮೂರ್ತಿಯು ಅಪರೂಪದ ಭಂಗಿಯಲ್ಲಿದ್ದು (ಬಾಲ ಎಡದಿಂದ ಬಲಕ್ಕೆ), “ಅಸಾಧ್ಯ ಸಾಧಕ” ಎಂದು ಕರೆಯಲ್ಪಡುತ್ತದೆ.
ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ, ಈ ದೇವಾಲಯವು ಪ್ರಸಿದ್ಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ.

Banner Ad