ಸುದ್ದಿ ಕನ್ನಡ ವಾರ್ತೆ
ಕಾರವಾರ: ಕಲ್ವರಿ ದರ್ಜೆಯ ಜಲಾಂತರ್ಗಾಮಿ ನೌಕೆಗಳಲ್ಲಿ ಅಳವಡಿಸಲಾಗಿರುವ ಅತ್ಯಂತ ನಿರ್ಣಾಯಕ ‘ನ್ಯೂಮ್ಯಾಟಿಕ್’ ವ್ಯವಸ್ಥೆಗಳ ಪರೀಕ್ಷೆ, ನಿರ್ವಹಣೆ ಮತ್ತು ದುರಸ್ತಿಗಾಗಿ ದೇಶದ ಮೊದಲ ವಿಶೇಷ ಘಟಕವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಉದ್ಘಾಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ ಚೀಫ್ ಆಫ್ ಮೆಟೀರಿಯಲ್ ಆದ ವೈಸ್ ಅಡ್ಮಿರಲ್ ಬಿ. ಶಿವಕುಮಾರ ಅವರು ಕಾರವಾರದ ‘ನೇವಲ್ ಗ್ರೂಪ್ ಇಂಡಿಯಾ’ ಕಾರ್ಯಾಗಾರದಲ್ಲಿ ಈ ‘ನ್ಯೂಮ್ಯಾಟಿಕ್ ರಾಮ್ ಟೆಸ್ಟ್ ಫೆಸಿಲಿಟಿ’ಯನ್ನು ಉದ್ಘಾಟಿಸಿದ್ದಾರೆ.
ಭಾರತೀಯ ನೌಕಾಪಡೆಯ ಕಲ್ವರಿ ದರ್ಜೆಯ ಜಲಾಂತರ್ಗಾಮಿಗಳ ನಿರ್ವಹಣೆ ಮತ್ತು ಸುಸ್ಥಿತಿಯನ್ನು ಕಾಪಾಡುವಲ್ಲಿ ಈ ಘಟಕವು ಭಾರತದ ಸ್ವದೇಶಿ ಸಾಮರ್ಥ್ಯವನ್ನು ಬಲಪಡಿಸುವ ಒಂದು ಪ್ರಮುಖ ಮೈಲಿಗಲ್ಲು ಎಂದು ಗುರುತಿಸಲಾಗಿದೆ.
ಈವರೆಗೆ, ಈ ನ್ಯೂಮ್ಯಾಟಿಕ್ ರಾಮ್‌ಗಳನ್ನು ಪರೀಕ್ಷೆ ಮತ್ತು ದುರಸ್ತಿಗಾಗಿ ಫ್ರಾನ್ಸ್‌ಗೆ ಕಳುಹಿಸಬೇಕಾಗಿತ್ತು. ಇದರಿಂದಾಗಿ ಕೆಲಸ ಮುಗಿದು ಬರಲು ದೀರ್ಘ ಸಮಯ ಬೇಕಾಗುತ್ತಿತ್ತು ಮತ್ತು ಸಾಗಣೆ ವೆಚ್ಚವೂ ಹೆಚ್ಚಾಗುತ್ತಿತ್ತು. ಎಂದು ಪ್ರಕಟಣೆ ವಿವರಿಸಿದೆ. ಮಾರ್ಚ್ 13 ರಂದು ಉದ್ಘಾಟನೆಗೊಂಡ ಹೊಸ ಕೇಂದ್ರವು ಜಲಾಂತರ್ಗಾಮಿಗಳ ನಿರ್ವಹಣಾ ಕಾರ್ಯಗಳ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ.
ಜಾಗತಿಕ ಮಟ್ಟದಲ್ಲಿ ಭಾರತ: ಈ ನಿರ್ವಹಣೆ, ದುರಸ್ತಿ ಮತ್ತು
ಓವರ್‌ಹಾಲ್ ಸೌಲಭ್ಯವು ಪ್ರಸ್ತುತ ವಿಶ್ವದ ಕೇವಲ ಮೂರು ದೇಶಗಳಲ್ಲಿ ಅಂದರೆ ಫ್ರಾನ್ಸ್, ಬ್ರೆಜಿಲ್ ಮತ್ತು ಭಾರತದಲ್ಲಿಮಾತ್ರ ಲಭ್ಯವಿದೆ ಎಂದು ತಿಳಿಸಲಾಗಿದೆ.
ಸಹಯೋಗ ಮತ್ತು ಆತ್ಮನಿರ್ಭರತೆ: ಈ ಸೌಲಭ್ಯವನ್ನು ಭಾರತೀಯ ಎಂಎಸ್ ಎಂಇ ಪಾಲುದಾರ ಸಂಸ್ಥೆಯಾದ ‘ಎಸ್ ಇಸಿ ಇಂಡಸ್ಟ್ರೀಸ್’ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ ತಯಾರಿಸಲಾಗಿದೆ. ಇದು ರಕ್ಷಣಾ ವಲಯದಲ್ಲಿ ಭಾರತ ಸರ್ಕಾರದ ‘ಆತ್ಮನಿರ್ಭರ ಭಾರತ’ ದೃಷ್ಟಿಕೋನವನ್ನು ಬೆಂಬಲಿಸುವ ನೇವಲ್ ಗ್ರೂಪ್‌ನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಮಜಗಾಂವ್ ಡಾಕ್ ಶಿಪ್‌ ಬಿಲ್ಡರ್ಸ್ ಲಿಮಿಟೆಡ್ ಮತ್ತು ನೇವಲ್ ಗ್ರೂಪ್ ಸಹಯೋಗದಲ್ಲಿ ನಿರ್ಮಿಸಲಾದ ಕಲ್ವರಿ ದರ್ಜೆಯ ಜಲಾಂತರ್ಗಾಮಿಗಳು,ಭಾರತದ ಜಲಾಂತರ್ಗಾಮಿ ಸಾಮರ್ಥ್ಯ ಮತ್ತು ಭಾರತ-ಫ್ರಾನ್ಸ್ ನಡುವಿನ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆಗೆ ಪ್ರಮುಖ ಉದಾಹರಣೆಯಾಗಿದೆ.
ನೇವಲ್ ಗ್ರೂಪ್ ಇಂಡಿಯಾ ಸಂಸ್ಥೆಯು ಸೆಪ್ಟೆಂಬರ್ 2008 ರಲ್ಲಿ ಸ್ಥಾಪನೆಯಾಗಿದ್ದು, ಸ್ಟಾರ್ಪೀನ್ ಜಲಾಂತರ್ಗಾಮಿಗಳ ಉಪಕರಣಗಳ ಸ್ವದೇಶೀಕರಣಕ್ಕೆ ಬೆಂಬಲ ನೀಡುವುದು, ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಭಾರತವನ್ನು ಜಲಾಂತಗಾರ್ಮಿಗಳ ನಿರ್ವಹಣೆಯ ಕೇಂದ್ರವನ್ನಾಗಿ ರೂಪಿಸಲು ಈ ಸಂಸ್ಥೆ ಶ್ರಮಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.