Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ಜಿಲ್ಲೆಯ ರೈತರು ಪ್ರಸ್ತುತ ಸಾಲಿನಲ್ಲಿ‌ ತೀವ್ರ ಸಂಕಷ್ಟದಲ್ಲಿದ್ದು, ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈ ಕೂಡಲೇ ಕ್ಷೇತ್ರದ ಶಾಸಕರು ತಮ್ಮ ನೇತೃತ್ವದಲ್ಲಿ ರೈತರು, ಸಹಕಾರಿ ಸಂಘಗಳ ಪ್ರಮುಖರು, ಕೃಷಿ ವಿಜ್ಞಾನಿಗಳು, ತೋಟಗಾರಿಕಾ ಹಾಗು ಕೃಷಿ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದು ರೈತರ ಸಮಸ್ಯೆಗೆ ತುರ್ತು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

Banner Ad

ಅವರು ಶಿರಸಿ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಎಲೆಚುಕ್ಕಿ ರೋಗದ ತೀವ್ರತೆಗೆ ಜಿಲ್ಲೆಯ ಜನ ಹೈರಾಣಾಗಿದ್ದು, ನಿತ್ಯದ ಬದುಕನ್ನು ಸಾಗಿಸುವುದು ಸಹ ಕಷ್ಟಕರವಾಗಿದೆ. ಸಂಕಷ್ಟದಲ್ಲಿರುವ ರೈತರ ಪರವಾಗಿ ಬಿಜೆಪಿ ಸದಾ ನಿಲ್ಲಲಿದ್ದು, ಅದೇ ಕಾರಣಕ್ಕೆ ಮಳೆ ಮಾಪನ ಯಂತ್ರ ಸರಿಯಿಲ್ಲದಿದ್ದರೂ ಸಹ ಕಳೆದ ಅವಧಿಯಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದ ಫಲವಾಗಿ ರೈತರಿಗೆ ಬೆಳೆವಿಮೆ ಹಣ ದೊರಕಿಸಿಕೊಡಲಾಗಿತ್ತು. ಈ ವರ್ಷವೂ ಸಹ ಸಂಸದರ ಪ್ರಯತ್ನದ ಫಲವಾಗಿ ಬೆಳೆವಿಮೆ ಹಣ ಜಮಾ ಆಗುತ್ತಿದೆ. ಕಳೆದ ವರ್ಷವೇ ಮಳೆ ಮಾಪನ ಯಂತ್ರವನ್ನು ಸರಿಪಡಿಸುವಂತೆ ಸಂಸದರು ತಾಕೀತು ಮಾಡಿದ್ದರೂ ಸಹ ರಾಜ್ಯ ಸರಕಾರದ ನಿಷ್ಕಾಳಜಿ ತೋರುವ ಮೂಲಕ ಜಿಲ್ಲೆಯ ರೈತರ ಬದುಕಿನಲ್ಲಿ ಚೆಲ್ಲಾಟ ಮಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

ವಿಧಾನಸಭೆ ಅಧಿವೇಶನದಲ್ಲಿ ಶಿರಸಿ ಕ್ಷೇತ್ರದ ಶಾಸಕರು ಕೇವಲ ಕ್ಷೇತ್ರದ ಜನತೆಯೆದರು ಪ್ರಚಾರಕ್ಕಾಗಿ ಕಾಟಾಚಾರಕ್ಕೆ ಪ್ರಶ್ನೆ ಕೇಳಿ ಸುಮ್ಮನೆ ಕೂತಿದ್ದಾರೆ. ಎಲೆ ಚುಕ್ಕೆ ರೋಗಕ್ಕೆ ಔಷಧಿ ಸಹಾಯ ಧನ ಸರ್ಕಾರ 62 ಕೋಟಿ ರೂಪಾಯಿ ಮೀಸಲಿರಿಸಿದೆ ಎಂದು ಹೇಳಿಕೊಂಡಿದ್ದು, ಆದರೆ, ಈವರೆಗೆ ಕೇವಲ 5.25 ಕೋಟಿ ರೂಪಾಯಿ ಮಾತ್ರ ಖರ್ಚಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹಾಗಿದ್ದಲ್ಲಿ ಬಾಕಿ ಉಳಿದಿರುವ 56.75 ಕೋಟಿ ರೂಪಾಯಿ ಎಲ್ಲಿ ಹೋಯಿತು? ಸರ್ಕಾರದ ವರದಿಯ ಪ್ರಕಾರ ಕೇವಲ 16,000 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 22,000 ಕ್ಕೂ ಹೆಚ್ಚು ರೈತರು ಈ ರೋಗದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ತೋಟಗಾರಿಕೆ ಮಂತ್ರಿ ಜಿಲ್ಲೆಗೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಬೇಕು ಎಂದರು.

ರೈತರು ತಮ್ಮ ಹಿಡುವಳಿ ಆಧಾರದಲ್ಲಿ ಕೃಷಿ ಅಭಿವೃದ್ಧಿಗೊಸ್ಕರ ಸರ್ಕಾರದ ಬಡ್ಡಿ ರಿಯಾಯತಿ ಯೋಜನೆಯಡಿಯಲ್ಲಿ ಕೃಷಿ ಮಾಧ್ಯಮಿಕ ಸಾಲವನ್ನು ಕೃಷಿ ಸಹಕಾರ ಸಂಘಗಳಿಂದ ಪಡೆದಿರುತ್ತಿದ್ದು ಅವುಗಳನ್ನು ಗರಿಷ್ಠ 5 ರಿಂದ 7 ಕಂತುಗಳಲ್ಲಿ ಮರುಭರಣ ಮಾಡಬೇಕಿರುತ್ತದೆ. ಪ್ರತಿ ವರ್ಷ ಈ ಸಾಲದ ಕಂತನ್ನು ಏಪ್ರಿಲ್ 15 ರಿಂದ 30 ರ ಒಳಗಾಗಿ ಪಾವತಿಸಬೇಕಿದ್ದು ಆದರೆ ಈ ವರ್ಷ ಸದರ ಸಾಲದ ಕಂತನ್ನು ಪಾವತಿಸುವುದು ಕಷ್ಟಕರವಾಗಿರುತ್ತದೆ. ಕೊಳೆರೋಗ ಮತ್ತು ಎಲೆಚುಕ್ಕಿ ರೋಗದ ಕಾರಣ ರೈತರು ಊಟ ಮಾಡುವುದೇ ಕಷ್ಟವಾಗಿದೆ. ನಮ್ಮ ಜಿಲ್ಲೆಯ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ರೈತರ ಮಾಧ್ಯಮಿಕ ಸಾಲವನ್ನು ಮನ್ನಾ ಮಾಡಬೇಕು ಜೊತೆಗೆ ಹಣ ತುಂಬುವ ಪ್ರಕ್ರಿಯೆ ತಡವಾದರೆ ರೈತರನ್ನು ಕಟ್ಟುಬಾಕಿ ಮಾಡದೆ ಸಮಯ ನೀಡಿ ಬೆಳೆ ಸಾಲ ಸಿಗುವಂತಾಗಬೇಕು,ಯಾವುದೇ ಕಾರಣಕ್ಕೆ ಸಾಲ ಕಟ್ಟಲು ರೈತರಿಗೆ ಕಿರುಕುಳ ನೀಡುವಂತಿಲ್ಲ. ಯಾವುದೇ ರೈತನಿಗೆ ಸಮಸ್ಯೆ ಆದರೆ ಬಿಜೆಪಿ ರೈತಮೋರ್ಚಾ ಅವರ ಜೊತೆಗೆ ನಿಲ್ಲುವುದರ ಮೂಲಕ ಸಹಾಯಕ್ಕೆ ನಿಲ್ಲುತ್ತದೆ ಈ ಮೂಲಕ ಘೋಸಿಸುತ್ತೇವೆ ಎಂದರು.

ಬಿಜೆಪಿ‌ ಶಿರಸಿ ತಾಲೂಕು ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಜಿಲ್ಲೆಯ ರೈತರು ಅನುಭವಿಸುತ್ತಿರುವ ಎಲೆಚುಕ್ಕಿ‌ರೋಗ, ಕೊಳೆ ರೋಗ ಸೇರಿದಂತೆ ಎಲ್ಲ ಸಮಸ್ಯೆಗಳ ಕುರಿತಾಗಿ ರೈತಮೋರ್ಚಾ ಕಳಕಳಿಯನ್ನು ಹೊಂದಿದ್ದು , ಹಂತ ಹಂತವಾಗಿ ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದೆ. ಶಾಸಕರು ಸ್ಥಳೀಯ ರೈತರ ಸಮಸ್ಯೆಯನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ, ಪರಿಹಾರ ದೊರಕಿಸಿಕೊಡಬೇಕಿದೆ ಎಂದರು.

ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುರೇಶ ನಾಯ್ಕ ಕಾನಗೋಡು ಮಾತನಾಡಿ, ರೈತರ ಸಮಸ್ಯೆಯನ್ನು ಕ್ಷೇತ್ರದ ಶಾಸಕರು ಮೊದಲ ಆದ್ಯತೆಯ ಮೇರೆಗೆ ಪರಿಹರಿಸಬೇಕು. ಇಲ್ಲವಾದಲ್ಲಿ ಬಿಜೆಪಿ ರೈತಮೋರ್ಚಾ ರಸ್ತೆಗಿಳಿದು ರೈತಪರ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸುತ್ತದೆ ಎಂದರು.

ರೈತಮೋರ್ಚಾ ಶಿರಸಿ ತಾಲೂಕು ಅಧ್ಯಕ್ಷ ಜಿ ವಿ ಹೆಗಡೆ ಓಣಿಕೇರಿ ಮಾತನಾಡಿ, ಸಂಸದರ ಪ್ರಯತ್ನದ ಫಲವಾಗಿ ಕಳೆದ ವರ್ಷ ಹಾಗು ಈ ಬಾರಿ ಬೆಳೆವಿಮೆ ಜಮಾ ಆಗಿದೆ. ಈ ಕೂಡಲೇ ರಾಜ್ಯ ಸರಕಾರ ಮಳೆ ಮಾಪನ ಯಂತ್ರಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ರೈತಮೋರ್ಚಾ ಪ್ರಭಾರಿ ಪ್ರಶಾಂತ ನಾಯ್ಕ, ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ಸಿದ್ದಾಪುರ ರೈತಮೋರ್ಚಾ ತಾಲೂಕು ಅಧ್ಯಕ್ಷ ನಾರಾಯಣ ಚಾರೆಕೋಣೆ, ಬಿಜೆಪಿ ಪ್ರಮುಖರಾದ ಡಾನಿ ಡಿಸೋಜಾ ಇದ್ದರು.

ಖೋಟ್ :
ಜಿಲ್ಲೆಯಲ್ಲಿ ಎಲೆಚುಕ್ಕಿ ರೋಗಕ್ಕೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಅಥವಾ ಸಹಾಯ ಧನವನ್ನು ನೀಡಬೇಕು. ಜೊತೆಗೆ ಎನ್.ಡಿ.ಆರ್.ಆಫ್. ಪ್ರತಿ ಹೆಕ್ಟೇರ್ ಗೆ 22,000 ರೂ. ನೀಡಲು ಅವಕಾಶವಿದ್ದು, ಆ ಮೂಲಕ ರೈತರ ಸಂಕಷ್ಟಕ್ಕೆ ಸಹಾಯಧನ ನೀಡಲು ಒತ್ತಾಯಿಸುತ್ತೇನೆ.

– ಅನಂತಮೂರ್ತಿ ಹೆಗಡೆ
ಬಿಜೆಪಿ ಜಿಲ್ಲಾಧ್ಯಕ್ಷ, ರೈತಮೋರ್ಚಾ ಉತ್ತರ ಕನ್ನಡ

ಬಾಕ್ಸ್ :
ಮನಸ್ಸಿಗೆ ಬಂದ ಹಾಗೆ ಅಧಿಕಾರಿಗಳಿಂದ ವರದಿ ಸಲ್ಲಿಕೆ

ರಾಜ್ಯ ಸರಕಾರದ ಅಧಿಕಾರಿಗಳು ಮನಸ್ಸಿಗೆ ಬಂದ ಹಾಗೆ ಮಳೆ ವರದಿ ಕೊಟ್ಟಿದ್ದಾರೆ. ಪಕ್ಕದ ಪಂಚಾಯತ್ ಬಂದಿರುವ ಮಳೆ ಪ್ರಮಾಣವನ್ನೇ ಆಧರಿಸಿ ವರದಿ ಕೊಟ್ಟಿದ್ದಾರೆ. ಒಂದೇ ಪ್ರಕಾರದ ಮಳೆ ಬಂದಿರುವ ಮತ್ತಿಘಟ್ಟಕ್ಕೆ ಗುಂಟೆಗೆ 170 ರೂ., ಬಂಡಲ ಪಂಚಾಯತ್ ನಲ್ಲಿ ಗುಂಟೆಗೆ 900. ರೂ ಪರಿಹಾರ ಬಂದಿದೆ. ದೊಡ್ನಳ್ಳಿ ಪಂಚಾಯತ್ ನಲ್ಲಿ ಗುಂಟೆಗೆ 50 ರೂ. ಬಂದರೆ ಬಿಸಲಕೊಪ್ಪದಲ್ಲಿ 500 ರೂ ಬಂದಿದೆ. ಇದಕ್ಕೆ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ನೈತಿಕ ಹೊಣೆ ಹೊರಬೇಕು. ಶಾಸಕರ ಹಾಗು ಸಚಿವರ ಅಸಡ್ಡೆ ಪರಿಣಾಮವಾಗಿ ಅಡಿಕೆ ಬೆಳೆಗಾರರು ಗೋಳಾಡುವ ಪರಿಸ್ಥಿತಿ ಉಂಟಾಗಿದೆ. ಇನ್ಶೂರೆನ್ಸ್ ಕಂಪನಿ ಜೊತೆ ರಾಜ್ಯ ಸರಕಾರ ಶಾಮಿಲಾಗಿ ಹೀಗೆ ಮಾಡುತ್ತಿವೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.

Banner Ad