ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಪ್ರಮುಖ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು. ಮುಖ್ಯವಾಗಿ ಕಾಚೆಗುಡ – ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲನ್ನು (12789/90) ಕುಮಟಾ ರೈಲ್ವೆ ನಿಲ್ದಾಣದವರೆಗೆ ವಿಸ್ತರಿಸುವಂತೆ ಈ ಸಂದರ್ಭದಲ್ಲಿ ಸಚಿವರಿಗೆ ವಿಶೇಷವಾಗಿ ಒತ್ತಾಯಿಸಿ,ಜಿಲ್ಲೆಯ ಪ್ರಯಾಣಿಕರ ಹಿತದೃಷ್ಟಿಯಿಂದ ಈ ವಿಸ್ತರಣೆಯು ಅತ್ಯಂತ ಅವಶ್ಯಕವಾಗಿದ್ದು, ಇದರಿಂದ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಲಾಯಿತು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಕುಮಟಾ ವಿಸ್ತರಣೆಗೆ ಸಂಬಂಧಿಸಿದಂತೆ ಶೀಘ್ರವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರಿಗೆ ಈ ಹಿಂದೆಯೇ ಮನವಿ ಸಲ್ಲಿಸಿ ಚರ್ಚಿಸಲಾಗಿತ್ತು. ಜಿಲ್ಲೆಯ ರೈಲ್ವೆ ಯೋಜನೆಗಳ ವೇಗದ ಅನುಷ್ಠಾನಕ್ಕಾಗಿ ಸಚಿವರ ಭೇಟಿ ಮತ್ತು ಅವರ ಸಕಾರಾತ್ಮಕ ಸ್ಪಂದನೆ ಆಶಾದಾಯಕವಾಗಿದೆ, ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ
