ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಜೀಯೋ ಟವರ್ ಸಮೀಪ ಶನಿವಾರ ಬೆಳಗಿನ ಜಾವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.
ರಾಮದುರ್ಗದಿಂದ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಕಾರು ಇದಾಗಿದ್ದು, ಸುಮಾರು 15 ಅಡಿ ಕಂದಕದಲ್ಲಿ ಬಿದ್ದಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ.
ಬೆಳಗಾವಿ ಮೂಲದ ಬಸವರಾಜ ಎಂಬುವವರು ಶನಿವಾರ ಹುಬ್ಬಳ್ಳಿಯಿಂದ ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಯಲ್ಲಾಪುರ ಪಟ್ಟಣದ ಬಾಳಗಿ ಕಾಂಪ್ಲೆಕ್ಸ್ ಬಳಿ ಬಂದಾಗ ನಿಯಂತ್ರಣ ಕಳೆದುಕೊಂಡ ಕಾರು, ಮೊದಲು ಹೆದ್ದಾರಿ ಸೂಚನಾ ಫಲಕಕ್ಕೆ ಗುದ್ದಿದೆ. ನಂತರ ರಭಸವಾಗಿ ಸಾಗಿ ಯುಕೆ ಸೌಹಾರ್ದ ಬ್ಯಾಂಕಿನ ಹಿಂಭಾಗದಲ್ಲಿದ್ದ ಹೊಂಡಕ್ಕೆ ಹಾರಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಬೆಳಗಾವಿಯ ರೋಹಿತ ಅವರ ಕುತ್ತಿಗೆಯ ಹಿಂಭಾಗಕ್ಕೆ ಪೆಟ್ಟಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಯಲ್ಲಾಪುರ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
