ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನಾದ್ಯಂತ
ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ, ತಾಲೂಕಿನಲ್ಲಿ ಸುಗ್ಗಿಯ ಸಂಭ್ರಮ ಹೆಚ್ಚುತ್ತಿದೆ. ತಾಲೂಕಿನಲ್ಲಿ ವಿಶೇಷವಾಗಿ ಬುಡಕಟ್ಟು ಕುಣಬಿ ಜನಾಂಗದ, ಮರಾಠ,ಹಾಲಕ್ಕಿ, ಗೌಳಿ ಸಮಾಜದವರು ಸೇರಿದಂತೆ ಇನ್ನು ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಪ್ರಾರಂಭಿಸಿದ್ದಾರೆ. ಹೋಳಿ ಹುಣ್ಣಿಮೆಗೆ ಮುನ್ನ ಸುಗ್ಗಿ(ಸಿಗ್ಮೋ) ಕಟ್ಟುವ ತಂಡ ಬಳಿಕ ಊರೂರು ಸುತ್ತುತ್ತಾ ತಮ್ಮ ಸಮಾಜ, ಹಾಗೂ ಸಾರ್ವಜನಿಕ ಸ್ಥಳ ಹಾಗೂ ಮನೆ-ಮನೆಗೆ ತೆರಳಿ ಕುಣಿತ ನಡೆಸುತ್ತಾರೆ. ಸುಗ್ಗಿ(ಸಿಗ್ಮೋ) ಕುಣಿತವನ್ನು ಹೋಳಿ ಹುಣ್ಣಿಮೆಯವೆರೆಗೂ ನೇರವೇರಿಸುತ್ತಾರೆ.

ಗ್ರಾಮ ದೇವರಿಗೆ,ಮಾಂಡ್(ಸಿಗ್ಮೋ ಕುಣಿತ ಆರಂಭಿಸುವ ಸ್ಥಳ)ನಲ್ಲಿ ಆಯಾ ಊರಿನ ಮಿರಾಶಿಗಳು ದೇವರಲ್ಲಿ ಪೂಜೆ, ಪ್ರಾರ್ಥನೆಯನ್ನು ಮಾಡಿ ಸುಗ್ಗಿ (ಸಿಗ್ಮೋ)ಕುಣಿತದ ಕಾರ್ಯಕ್ರಮಗಳು ಒಳ್ಳೆಯ ರೀತಿಯಲ್ಲಿ ನಡೆಯಲಿ,ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ, ಪೇಟವನ್ನು ಕಟ್ಟಿ,ಪಗಡೆ ವೇಷಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಮನಸೆಳೆಯುತ್ತದೆ.ದೇವ-ದೇವತೆಯರ,ಪ್ರಕೃತಿಯ ಕುರಿತಾದ ಹಾಡುಗಳು ಇದರೊಂದಿಗೆ ಗುಮಟೆ, ಜಾಗಟೆಯ ಸದ್ದು, ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಒಮ್ಮೆ ವೇಷತೊಟ್ಟು ಹಣೆಗೆ ಗಂಧವನ್ನು ಇಟ್ಟು-ಕೊಂಡು ಸುಗ್ಗಿ ಕುಣಿತ ಆರಂಭ ಮಾಡಿದ ನಂತರ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸಿ ತಮ್ಮ ಮನೆಗಳಿಗೆ ಮರಳುತ್ತಾರೆ. ಹಣೆಗೆ ಗಂಧವನ್ನು ಇಟ್ಟು- ಹಿರಿಯರ ಹಾಗೂ ಯುವಕರ ಸಮ್ಮೀಳಿತ ತಂಡವು ಒಟ್ಟಾಗಿ ಊರೂರು ಸುತ್ತುತ್ತಾ ಆಯಾ ಊರಿನವರು ತಿಂಡಿ,ಊಟದ ವ್ಯವಸ್ಥೆಯನ್ನು ಖುಷಿಯಿಂದ ಮಾಡುತ್ತಾರೆ.ಸುಗ್ಗಿ(ಸಿಗ್ಮೋ)ಕುಣಿತ ಆದ ಮೇಲೆ ಆಯಾ ಮನೆಯವರು ವಸ್ತುವಿನ,ಹಣದ ರೂಪದಲ್ಲಿ ದೇವರಿಗೆ ಕಾಣಿಕೆಯನ್ನು ನೀಡುತ್ತಾರೆ. ಪ್ರತಿಯೊಬ್ಬರೂ ಸಹ ಸುಗ್ಗಿ(ಸಿಗ್ಮೋ)ಕುಣಿತದ ತಂಡದವರು ನಮ್ಮ ಮನೆಯ ಅಂಗಳದಲ್ಲಿ ಸುಗ್ಗಿ ಕುಣಿತವನ್ನು ಮಾಡಿ ದೇವರ ಕಾಣಿಕೆಗಳನ್ನು ಸ್ವೀಕರಿಸಲಿ ಎಂದು ಬೇಡಿಕೊಳ್ಳುತ್ತಾರೆ.

ಜಾನಪದ ಕಲೆಗಳು ವಿನಾಶದ ಅಂಚಿನಲ್ಲಿರುವ ಈ ದಿನಗಳಲ್ಲಿ ತಲೆ ತಲಾಂತರಗಳಿಂದ ಬಂದಿರುವ ಸಾಂಪ್ರದಾಯಿಕ ಸುಗ್ಗಿ(ಸಿಗ್ಮೋ) ಕುಣಿತದ ಕಲೆಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸುಗ್ಗಿಯಲ್ಲಿ ಮಕ್ಕಳು, ಯುವಕರೂ ಸಹ ಹಿರಿಯರೊಂದಿಗೆ ಒಟ್ಟಾಗಿ ಪಾಲ್ಗೊಳ್ಳುವುದರಿಂದ ಮುಂದಿನ ಪೀಳಿಗೆಗೂ ಆಚರಣೆಗಳನ್ನು ಮುಂದುವರೆಸುತ್ತಿರುವುದು ಸಂತಸದ ವಿಷಯವಾಗಿದೆ.(ಧವಳೋ ಗಣೇಶ ಸಾವರ್ಕರ್, ಗುಂದ,ಜೋಯಿಡಾ)