ಸುದ್ದಿ ಕನ್ನಡ ವಾರ್ತೆ
ಶಿರಸಿ : ಶ್ರೀಲಂಕಾದ ಕೊಲೊಂಬೊದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ‘ಐರನ್‌ಮ್ಯಾನ್ 70.3’ ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ಶಶಿಭೂಷಣ ಹೆಗಡೆ ದೊಡ್ಡನೆ ಅತ್ಯಂತ ಯಶಸ್ವಿಯಾಗಿ ಗುರಿ ತಲುಪುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿಶ್ವದ ಅತ್ಯಂತ ಕಠಿಣ ದೈಹಿಕ ಮತ್ತು ಮಾನಸಿಕ ಪರೀಕ್ಷೆ ಎಂದು ಕರೆಯಲಾಗುವ ಈ ಸ್ಪರ್ಧೆಯನ್ನು ಶಶಿಭೂಷಣ ಅವರು ಕೇವಲ 6 ಗಂಟೆ 48 ನಿಮಿಷಗಳಲ್ಲಿ ಪೂರ್ಣಗೊಳಿಸಿ, ತಮ್ಮ ಅದ್ಭುತ ಫಿಟೈಸ್ ಮತ್ತು ದೃಢ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ.
ಸಾಧನೆಯ ಹಾದಿ: ಒಟ್ಟು 113 ಕಿಲೋಮೀಟರ್(70.3 ಮೈಲಿ) ದೂರದ ಈ ಕಠಿಣ ಪಥವನ್ನು ಶಶಿಭೂಷಣ ಅವರು ಮೂರು ಹಂತಗಳಲ್ಲಿ ಯಶಸ್ವಿಯಾಗಿ ಕ್ರಮಿಸಿದರು. ಸಮುದ್ರದಲ್ಲಿ 1.9 ಕಿ.ಮೀ ಈಜುವ ಮೂಲಕ ಸವಾಲನ್ನು ಆರಂಭಿಸಿದರು. ಈಜಿನ ಬೆನ್ನಲ್ಲೇ 90 ಕಿ.ಮೀ ದೂರದ ಸೈಕ್ಲಿಂಗ್ ಪೂರೈಸಿದರು. ಅಂತಿಮವಾಗಿ 21.1 ಕಿ.ಮೀ ದೂರದ ಅರ್ಧ ಮ್ಯಾರಥಾನ್ ಓಟವನ್ನು ಪೂರ್ಣಗೊಳಿಸಿ ಫಿನಿಶಿಂಗ್ ಲೈನ್ ತಲುಪಿದರು.
ಈ ಸ್ಪರ್ಧೆಯನ್ನು ಪೂರ್ಣಗೊಳಿಸಲು ನಿಗದಿಪಡಿಸಿದ ಗರಿಷ್ಠ ಸಮಯ 8 ಗಂಟೆ 30 ನಿಮಿಷಗಳಾಗಿದ್ದು, ಅದಕ್ಕಿಂತಲೂ ಮುಂಚಿತವಾಗಿ ಗುರಿ ಮುಟ್ಟಿದ ಇವರ ಸಾಧನೆ ಅಪಾರವಾದುದು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ‘ಫಿಟ್ ಇಂಡಿಯಾ’ ಅಭಿಯಾನದಡಿ ಇಂತಹ ಕ್ರೀಡಾಪಟುಗಳನ್ನು ಶ್ಲಾಘಿಸಿದ್ದು, ಶಶಿಭೂಷಣ ಅವರ ಈ ಜಯವು ದೇಶದ ಯುವಜನತೆಗೆ ಸದೃಢ ಜೀವನಶೈಲಿಗೆ ದೊಡ್ಡಪ್ರೇರಣೆಯಾಗಿದೆ.
ಇನ್ನು ವರ್ಲ್ಡ್ ಟ್ರಯಾಫ್ಲಾನ್ ಕಾರ್ಪೊರೇಷನ್ ಆಯೋಜಿಸುವ ಈ ಸ್ಪರ್ಧೆಯನ್ನು ಪೂರ್ಣಗೊಳಿಸುವವರಿಗೆ ಜಾಗತಿಕವಾಗಿ ‘ಐರನ್ ಮ್ಯಾನ್’ ಎಂಬ ಗೌರವದ ಬಿರುದು ಲಭಿಸುತ್ತದೆ.
