ಸುದ್ದಿ ಕನ್ನಡ ವಾರ್ತೆ
ಭಟ್ಕಳ: ಎಲ್ಲೆಡೆ ಗಣೇಶೋತ್ಸವದ ಆಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಬುಧವಾರ ಬಹುತೇಕ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾರವಾರದ ಬಾಂಬ್ ನಿಷ್ಕ್ರೀಯ ದಳದವರು ಶ್ವಾನ ದಳದೊಂದಿಗೆ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿರುವ ಸ್ಥಳಕ್ಕೆ ಹಾಗೂ ವಿಸರ್ಜನಾ ಸ್ಥಳವಾದ ಚೌಥನಿ ಹೊಳೆಯ ಸಮೀಪ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದಲ್ಲಿ ಕಳೆದ ೪೧ ವರ್ಷಗಳಿಂದ ನಡೆಯುತ್ತಿರುವ ರಿಕ್ಷಾ ಚಾಲಕರ ಮಾಲಕರ ಸಂಘದ ಗಣೇಶೋತ್ಸವ ನಡೆಯುತ್ತಿರುವ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಶ್ವಾನ ದಳ ಭೇಟಿ ನೀಡಿ ಪರಿಶೀಲಿಸಿತು. ಪಟ್ಟಣದ ಸಾರ್ವಜನಿಕ ಗಣೇಶೋತ್ಸವ ನಡೆಯುವ ಸ್ಥಳಗಳಿಗೆ ಮತ್ತು ಜನನಿಬಿಡ ಪ್ರದೇಶಕ್ಕೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಸಂದರ್ಭದಲ್ಲಿ ಬಾಂಬ್ ನಿಷ್ಕ್ರೀಯ ದಳದ ಸಂಜಯ್ ಭೋವಿ, ಆನಂದು ನಾಯ್ಕ, ಶೀಕು ಪೂಜಾರಿ ಮುಂತಾದವರು ಇದ್ದರು.
ವರದಿ: ಆರ‍್ಕೆ, ಭಟ್ಕಳ.