ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಘಂಟೆ ಗಣಪತಿ ದೇವಸ್ಥಾನ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದಲ್ಲಿದೆ. ಹೆಸರೇ ಹೇಳುವಂತೆ ಇಲ್ಲಿ ಗಂಟೆಯ ಹರಕೆ ಹೊತ್ತರೆ ಇಷ್ಠಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದೇವಸ್ಥಾನವು ಸೋದೆ ಅರಸರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡಿದೆ ಎಂಬ ಪ್ರತೀತಿ ಇದೆ. ಸೋಂದಾ ಸ್ವರ್ಣವಲ್ಲೀ ಮಠದ ಸೀಮೆಯಲ್ಲಿ ಬರುವ ಈ ಶ್ರೀ ಸಿದ್ಧಿವಿನಾಯಕ ದೇವಸ್ಥಾನವು ಸೋಂದಾ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.

ಭಕ್ತರು ತಮ್ಮ ಕಷ್ಟಕಾಲದಲ್ಲಿ ಘಂಟೆಯಲ್ಲಿ ಶ್ರೀ ಸಿದ್ಧಿವಿನಾಯಕನಿಗೆ ಹರಕೆ ಮಾಡಿಕೊಂಡು ತಮ್ಮ ಕಾರ್ಯ ಪೂರ್ಣಗೊಂಡಮೇಲೆ ಹರಕೆಯ ಮೂಲಕ ದೇವಸ್ಥಾನಕ್ಕೆ ಬಂದು ಗಂಟೆ ಸಮರ್ಪಿಸುವ ಪದ್ಧತಿಯಿದೆ. ಅನಾದಿ ಕಾಲದಿಂದಲೂ ಭಕ್ತಾದಿಗಳು ಗಂಟೆ ಅರ್ಪಿಸಿ ಹೋಮ ಹವನ ಮಾಡಿಸಿ ಹರಕೆ ಪೂರೈಸಿಕೊಳ್ಳುವ ವಾಡಿಕೆಯಿದೆ.

3/5/1979 ರಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಅಮೃತಹಸ್ತದಿಂದ ಶ್ರೀ ಸಿದ್ಧಿವಿನಾಯಕ ದೇವರ ಮೂರ್ತಿ ಪ್ರತಿಷ್ಠೆ ನೆರವೇರಿತ್ತು. ಶ್ರೀ ದೇವರ ನೂತನ ಕಟ್ಟಡದ ಶಿಲಾನ್ಯಾಸವನ್ನು 13/2/1992 ರಂದು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ನೆರವೇರಿಸಲಾಗಿದೆ.

ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಗರ್ಭಗುಡಿ ಹಾಗೂ ಘಂಟೆ ಮಂಟಪದಲ್ಲಿ ಕರ್ಣ ಮುಚ್ಚಿಗೆ ಮಾಡಲಾಗಿದ್ದು ಸೂರ್ಯಮಂಡಲ,ನಕ್ಷತ್ರ ಮಂಡಲ, ಕೆತ್ತಲಾಗಿದೆ. ಕೆತ್ತನೆಯ ಶಿಲಾಮಯ ಪಂಚಾಂಗಕ್ಕೆ ಆನೆಗಳ ಸಾಲು, ಘಂಟೆಗಳ ಮಾಲೆಗಳನ್ನು ಕೆತ್ತಲಾಗಿದೆ. ಚಂದ್ರಶಾಲೆಯ ಹದಿನೆಂಟು ಕಂಬಗಳಿಗೆ ರಾಜ್ಯದ ಮತ್ತು ಹೊರ ರಾಜ್ಯದ ಹಾಗೂ ವಿದೇಶದ ಪ್ರಸಿದ್ಧ ದೇವಾಲಯದ ಗಣಪತಿಯ ಚಿತ್ರ ಕೆತ್ತಲಾಗಿದೆ.

ಪ್ರಸಾದ ನೋಡುವ ಪದ್ಧತಿ…
ಮದುವೆ, ಶುಭಕಾರ್ಯ, ಹೊ ಉದ್ಯೋಗ, ಶಿಕ್ಷಣ, ಭೂಮಿ ಖರೀದಿ ಹೀಗೆ ವಿವಿಧ ಕೆಲಸಗಳ ಶುಭಾರಂಭಕ್ಕೆ ಘಂಟೆ ಗಣಪತಿ ದೇವಸ್ಥಾನದಲ್ಲಿ ಪ್ರಸಾದ ಕೇಳುವ ಪದ್ಧತಿಯಿದೆ. ಇಲ್ಲಿ ಶ್ರೀ ಸಿದ್ಧಿವಿನಾಯಕ ಪ್ರಸಾದ ನೀಡಿದರೆ ಅದು ಇಷ್ಠಾರ್ಥ ಸಿದ್ಧಿ. ಹರಕೆಗೆ ಘಂಟೆ ಮಾತ್ರವಲ್ಲದೆಯೇ ಗಣಹೋಮ ಮಾಡಿಸುವ ವಾಡಿಕೆ ಕೂಡ ಇದೆ. ಪ್ರತಿದಿನ ಇಂತಹ ಹರಕೆಯ ಹತ್ತಾರು ಗಣಹೋಮಗಳು ಇಲ್ಲಿ ನೆರವೇರುತ್ತಿರುತ್ತವೆ.
ಇದೀಗ ನೂತನವಾಗಿ ನಿರ್ಮಾಣಗೊಂಡಿರುವ ದೇವಸ್ಥಾನದ ಕಟ್ಟಡ ಕೂಡ ಸುಂದರವಾಗಿದೆ. ಭಕ್ತಾದಿಗಳು ನೀಡಿರುವ ಘಂಟೆ ಇಲ್ಲಿ ರಾಶಿ ರಾಶಿ ಬಿದ್ದಿದೆ. ನೀವು ಕೂಡ ಇಷ್ಠಾರ್ಥ ಸಿದ್ಧಿ ಘಂಟೆ ಗಣಪತಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯಿರಿ.