Banner Ad

ಸುದ್ದಿ ಕನ್ನಡ ವಾರ್ತೆ

“ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಗಣ್ಯ ಮನೆತನದ ಯೋಗ ಶಿಕ್ಷಕ, ಉಪನ್ಯಾಸಕ, ಸಾಹಿತಿ ಹಾಗೂ ಭಾರತೀಯ ಸಂಸ್ಕೃತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸಂತೋಷ ಶಂಕರೆಪ್ಪ ಯಕ್ಕುಂಡಿ ಅವರು ಬೆಂಗಳೂರಿನ ರೋಟರಿ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆ ಮತ್ತು ಅಮೆರಿಕ ಯೋಗ ಯೂನಿವರ್ಸಿಟಿ ಆಫ್ ಅಮೆರಿಕ ಇವರು ನೀಡುವ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

Banner Ad

 

ಈ ಪ್ರಯುಕ್ತ ಬೆಂಗಳೂರಿನ ಕೇಂದ್ರ ಬಸವ ಸಮಿತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರು, ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರಾದ ಮೋಹನ ಬಸನಗೌಡ ಪಾಟೀಲ ಅವರು ಬೇವಿನಕೊಪ್ಪ ನಿತ್ಯಾನಂದ ಆನಂದಾಶ್ರಮದಲ್ಲಿ ಸನ್ಮಾನಿಸಿ, ಅಭಿನಂದಿಸಿ, ಗೌರವಿಸಿದರು.

ಬೇವಿನಕೊಪ್ಪ ನಿತ್ಯಾನಂದ ಆಶ್ರಮದ ಸೇವಾರ್ಥಿ ಗೋರಿಸಾಬ ಅವರು ಮಾತನಾಡಿ, ಡಾ. ಸಂತೋಷ ಗುರೂಜಿಯವರು ಕಳೆದ 24 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಸುಮಾರು 20,000ಗಳಿಗಿಂತ ಹೆಚ್ಚಿನ ಜನರಿಗೆ ಯೋಗ ತರಬೇತಿಯನ್ನು ನೀಡಿರುವರು ಅವರು ಬಾಲ್ಯದಲ್ಲಿ ಕಡು ಬಡತನದ ಕುಟುಂಬದಲ್ಲಿ ಜನಿಸಿದರೂ ಸಹಿತ ಎಂ.ಪಿ. ಕಳಸದ ಇವರ ಮಾರ್ಗದರ್ಶನ ಸಿಕ್ಕಿರುವುದರಿಂದ ತಮ್ಮ ಯೌವ್ವನದ ವಯಸ್ಸಿನಲ್ಲಿ ತಮ್ಮ ಸಂಪೂರ್ಣ ಗಮನವನ್ನು ಶಿಕ್ಷಣದ ಮೇಲೆ ಕೇಂದ್ರೀಕರಿಸಿ ಭಾರತೀಯ ಗ್ರಾಮ ವಿಕಾಸ ಹಾಗೂ ಸ್ಫೂರ್ತಿದಾಯಕ ನಾಯಕತ್ವ ರೂಪಿಸುವ ಮಹಾವಿದ್ಯಾಲಯ ಬಿ.ಎ. ತತ್ಸಮಾನ ಪದವಿಯಲ್ಲಿ ಪ್ರಥಮ ರ್ಯಾಂಕ್, ಎಂ.ಎ. ತತ್ವಶಾಸ್ತ್ರ ಪದವಿಯಲ್ಲಿ ಸುವರ್ಣ ಪದಕ, ಡಿಪ್ಲೋಮಾ ಯೋಗ ಸ್ಟಡೀಸ್ ನಲ್ಲಿ ಡಿಸ್ಟಿಂಕ್ಷನ್, 2026 ರಲ್ಲಿ ಅನುಭಾವಿಗಳಾಗಿ ಶ್ರೀ ಚೆನ್ನಬಸವಣ್ಣನವರು ಮತ್ತು ಸಂತ ಶಿಶುನಾಳ ಶರೀಫರು ಒಂದು ತೌಲನಿಕ ಅಧ್ಯಯನ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸಲ್ಲಿಸಿ ಪಿಎಚ್.ಡಿ ಪದವಿಯನ್ನು ಪಡೆದಿರುವವರಾಗಿರುತ್ತಾರೆ.
ಈ ಸಂದರ್ಭದಲ್ಲಿ ಇವರಿಗೆ ದಕ್ಷಿಣ ಭಾರತ ರಾಜ್ಯಗಳ ಯೋಗ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೀಡಲಾಗುವ ರಾಜ್ಯಮಟ್ಟದ
ಪ್ರಶಸ್ತಿ ಲಭಿಸಿರುವುದು ನಮಗೆಲ್ಲ ಅತೀವ ಸಂತಸವನ್ನು ಉಂಟು ಮಾಡಿದೆ ಎಂದರು.

“ಬೆಳಗಾವಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಬಿಸಾಬ ಇಮಾಮಹುಸೇನ ಖುದ್ದುನವರ ಇವರು ಮಾತನಾಡಿ ಡಾ. ಸಂತೋಷ ಗುರೂಜಿ ಅವರು ಬಳ್ಳಾರಿ ನಗರದಲ್ಲಿ ಪದವಿಪೂರ್ವ ಕಾಲೇಜಿನ ತರ್ಕಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಮಕ್ಕಳಿಗೆ ಯೋಗ ಶಿಕ್ಷಣ ನೀಡುವುದು, ಕತೆ, ಕವನ, ಪ್ರಬಂಧ ರಚಿಸುವುದು, ಚಿತ್ರಕಲೆ, ಜೊತೆಗೆ ಸಂಶೋಧನಾ ಕಾರ್ಯವನ್ನು ಪೂರೈಸಿದ್ದು ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡು ಒಬ್ಬ ಪ್ರತಿಭಾನ್ವಿತ ವ್ಯಕ್ತಿ ನಮ್ಮ ಭಾಗದಲ್ಲಿ ಇರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ ಆಗಿದೆ ಎಂದರು.

ಬೈಲಹೊಂಗಲ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್. ಠಕಾಯಿ ಅವರು ಮಾತನಾಡಿ ಡಾ. ಸಂತೋಷ ಶಂ. ಯಕ್ಕುಂಡಿ ಅವರು ಎಲೆ ಮರೆಯ ಕಾಯಿಯಂತಿರುವ ಹಲವಾರು ಯೋಗಪಟುಗಳನ್ನು ಬೆಳಕಿಗೆ ತಂದಿರುವ ಗುರೂಜಿ ಅವರು ಇಂದು ಗಾಂಧಾರಿ ವಿದ್ಯೆ ತರಬೇತಿಯನ್ನು ಹಮ್ಮಿಕೊಂಡಿದ್ದಾರೆ. ಇದು ಮಕ್ಕಳ ಅಂತ:ಚಕ್ಷುವಿನ ಜಾಗೃತಿಯಾಗಿ ಇದರಿಂದ ಮಕ್ಕಳ ಏಕಾಗ್ರತೆ, ಬುದ್ಧಿಶಕ್ತಿ ಅಧಿಕಗೊಂಡು ಮಕ್ಕಳು ಓದಿನಲ್ಲಿ ಪ್ರಗತಿ ಸಾಧಿಸಲು ಮತ್ತಷ್ಟು ಸಹಾಯಕಾರಿಯಾಗಿದೆ.ಇಂತಹ ತರಬೇತಿಯನ್ನು ನೀಡುತ್ತಿರುವ ಸಂತೋಷ ಗುರೂಜಿಯವರ ಕಾರ್ಯ ಪ್ರಸಂಶನೀಯವಾದದ್ದು ಜೊತೆಗೆ ಇವರು ಸಾಹಿತ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಈಗಾಗಲೇ ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಬೆಳಗಾವಿ ಸಾಹಿತ್ಯ ಬಳಗ ಎಂಬ ವ್ಯಾಟ್ಸಪ್ ಗುಂಪನ್ನು ರಚಿಸಿ ಆ ಮೂಲಕ ಹಲವಾರು ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಕಾರಣೀಕರ್ತರು ಆಗಿದ್ದಾರೆ ಎಂದರು.

ಬೈಲಹೊಂಗಲ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ ಅವರು ಮಾತನಾಡಿ ಡಾ. ಸಂತೋಷ ಶಂಕರೆಪ್ಪ ಯಕ್ಕುಂಡಿ ಅವರು ಯೋಗ ಶಿಕ್ಷಕರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವುದು ಅಷ್ಟೇ ಅಲ್ಲದೆ ಮಕ್ಕಳ ಸಾಹಿತಿಗಳಾಗಿ ಬರುವ ನವೆಂಬರ್ ತಿಂಗಳಿನಲ್ಲಿ ‘ಚಿಣ್ಣರ ಚಿಲಿಪಿಲಿ’ ಎಂಬ ಮಕ್ಕಳ ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ನೀಡುತ್ತಿರುವುದು ನಮಗೆ ವಯಕ್ತಿಕವಾಗಿ ಹೆಮ್ಮೆಯ ವಿಷಯವಾಗಿದೆ ಎಂದರು.

ಆಶ್ರಮದ ಸೇವಾರ್ಥಿಗಳಾದ ಅಭಿಷೇಕ ನಿರೂಪಣೆ ಮಾಡಿದರು. ರವಿ ಪೂಜೇರಿ ಸ್ವಾಗತಿಸಿದರು. ಸಿದ್ದಾರ್ಥ ಹುಣಸಿಕಟ್ಟಿ ವಂದಿಸಿದರು.

Banner Ad