ಸುದ್ದಿ ಕನ್ನಡ ವಾರ್ತೆ
ಗಂಗಾವತಿ: ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಅತಿಮುಖ್ಯವಾಗಿದ್ದು ಲಯನ್ಸ್ ಶಾಲೆ ಆಡಳಿತ ಮಂಡಳಿ ಹಣ ಉಳಿಸುವ ನೆಪದಲ್ಲಿ ನಿಯಮ ಉಲ್ಲಂಘಿಸಿ ಒಂದೇ ಬಸ್ಸಿನಲ್ಲಿ 80ಕ್ಕೂ ಹೆಚ್ಚು ಮಕ್ಕಳು ಹಾಗೂ ಶಿಕ್ಷಕರನ್ನು ತುಂಬಿ ಆಕ್ಷೇಪಕ್ಕೆ ಒಳಗಾಗಿದೆ.

ನಗರದ ಲಯನ್ಸ್ ಚಾರಿಟೇಬಲ್ ಟ್ರಸ್ಟ ಲಯನ್ಸ್ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗದಗ ಕಪ್ಪತಗುಡ್ಡ ಸುತ್ತಮುತ್ತಲಿನ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಸ್ಥಳೀಯ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನ್ನು ಮುಂಗಡ ಬುಕ್ಕ ಮಾಡಿದ್ದು ನಿಯಮದಂತೆ ಮಕ್ಕಳನ್ನು ಕರೆದುಕೊಂಡು ಬರಲು ಒಪ್ಪಿ ಬುಧವಾರ ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಮಕ್ಕಳನ್ನು ಬಸ್ ಹತ್ತಿಸುವ ಸಂದರ್ಭದಲ್ಲಿ ಮಕ್ಕಳು ಸೇರಿ‌ ಶಿಕ್ಷಕ ಶಿಕ್ಷಕರೂ‌ ಸೇರಿ ೮೦ಕ್ಕೂ ಹೆಚ್ಚು ಜನರನ್ನು ಹತ್ತಿಸಲಾಗಿದೆ. ಈ ಕುರಿತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಬಸ್ ಚಾಲಕ ಗೊಂದಲಕ್ಕೀಡಾಗಿ ಬಸ್ ನ್ನು ಡಿಪೋಗೆ ತೆಗೆದುಕೊಂಡು ಹೋಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಿಯಮದಂತೆ ೬೪ ಮಕ್ಕಳು ೫ ಜನ ಶಿಕ್ಷಕ ಶಿಕ್ಷಕಿಯರು ಹಾಗೂ ಒರ್ವ ಆಯಾ ಅವರನ್ನು ಬಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಬಸ್ ನಲ್ಲಿ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವ ಕುರಿತು ಶಾಲೆಯ ಮುಖ್ಯಶಿಕ್ಷಕ ಇಲಾಖೆ ಗೆ ತಪ್ಪು ಮಾಹಿತಿ ನೀಡಿರುವ ಕುರಿತು ಇಲಾಖೆಯ ಅಧಿಕಾರಿಗಳು ಗಮನಿಸಬೇಕು.
ನಿಯಮ ಉಲ್ಲಂಘನೆ: ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಖಾಸಗಿ ಶಾಲೆಯವರು ನಿಯಮ ಉಲ್ಲಂಘಿಸಿ ಬಸ್,ಟ್ರ್ಯಾಕ್ಸ್ ಇತರೆ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರೂ ಶಿಕ್ಷಣ ಇಲಾಖೆಯ ಬಿಇಒ ಸೇರಿ ಸಂಬಂಧಿಸಿದ ಸಾರಿಗೆ ಇಲಾಖೆ,ಪೊಲೀಸ್ ಇಲಾಖೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಜವಾಬ್ದಾರಿ ಇದ್ದರೂ ಯಾವೊಬ್ಬ ಅಧಿಕಾರಿ ಈ ಕುರಿತು ಕಾರ್ಯ ಮಾಡುತ್ತಿಲ್ಲ. ಮಕ್ಕಳ ಜೀವಕ್ಕೆ ಬೆಲೆ ಇಲ್ಲದಂತೆ ಕೆಲ ಖಾಸಗಿ ಶಾಲೆಯವರು ವರ್ತಿಸುತ್ತಿದ್ದು ಪಾಲಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

 

ಲಯನ್ಸ್ ಕ್ಲಬ್ ಶಾಲೆಯ ಶೈಕ್ಷಣಿಕ ಪ್ರವಾಸಕ್ಕೆ ಒಂದು ಬಸ್ ನಲ್ಲಿ ೮೦ಕ್ಕೂ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವ ಕುರಿತು ಮಾಹಿತಿ ಬಂದ ತಕ್ಷಣ ಬಿಇಒ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ವ್ಯವಸ್ಥಾಪಕರ ಗಮನಕ್ಕೆ ತರಲಾಗಿದ್ದು ನಿಯಮದಂತೆ ಮಕ್ಕಳನ್ನು ಕರೆದು ಕೊಂಡು ಹೋಗಲು ಸೂಚನೆ ನೀಡಲಾಗಿದೆ. ಶಾಲೆಯವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.
-ಬಿ.ಸೋಮಶೇಖರ್ ಗೌಡ ಡಿಡಿಪಿಐ ಕೊಪ್ಪಳ.