ಸುದ್ದಿ ಕನ್ನಡ ವಾರ್ತೆ
ಚನ್ನಮ್ಮನ ಕಿತ್ತೂರು: ‘ಎಲ್ಲಿಯವರೆಗೆ ನಾವು ಮೌಢ್ಯದಿಂದ, ಜಾತಿ ತಾರತಮ್ಯದಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೂ ಬಸವಾದಿ ಶರಣರಿಗೆ ಹಿಂಸೆ ತಪ್ಪಿದ್ದಲ್ಲ’ ಎಂದು ಪತ್ರಕರ್ತ ಸಂತೋಷ ಈ. ಚಿನಗುಡಿ ಅಭಿಪ್ರಾಯ ಪಟ್ಟರು.
ಇಲ್ಲಿನ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಜಾನಪದ ವಿದ್ವಾಂಸ ಪ್ರೊ.ಸಿ.ಕೆ.ನಾವಲಗಿ ಅವರು ಬರೆದ ‘ಬಟ್ಟ ಬಯಲು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಶರಣರು ನುಡಿದಂತೆ ನಡೆದರು. ನಾವಲಗಿ ಅವರು ನಡೆದಂತೆ ಬರೆದಿದ್ದಾರೆ. ಈ ಕೃತಿಕರ್ತ ಬದುಕಿನ ಬೇರೆಬೇರೆ ಸಂದರ್ಭಗಳಲ್ಲಿ ಬರೆದ, ಮಂಡಿಸಿದ, ವಾಚಿಸಿದ, ಪ್ರಬಂಧಿಸಿದ, ಸಂದರ್ಭ ಸಿಗದೇ ಹುದುಗಿಟ್ಟುಕೊಂಡ ಬಿಡಿಬಿಡಿ ಲೇಖನಗಳು ಇಲ್ಲಿವೆ. ಇವು ಹಿಂದೆಂದೋ ಜನರ ಮುಂದೆ ಬಿತ್ತಿದ– ಬಿತ್ತರಿಸಿದ ಲೇಖನಗಳು. ಅವುಗಳನ್ನು ವರ್ತಮಾನದ ಚಾಣಗಿಯಲ್ಲಿ ಸೋಸಿ ಮತ್ತಷ್ಟು ಮೃದ– ಹದ ಮಾಡಿದ್ದಾರೆ. ಚೆದುರಿಹೋಗಿದ್ದ ವಿಚಾರಗಳನ್ನೆಲ್ಲ ಒಂದೇ ದಾರಕ್ಕೆ ಸಿಕ್ಕಿಸಿ, ಓದುಗಬ್ಬ ಸರ ಮಾಡಿದ್ದಾರೆ’ ಎಂದರು.
‘ಬರಹಗಾರನಿಗೆ, ಸಂಶೋಧಕನಿಗೆ ಪದ ಬಳಕೆ ಎಷ್ಟು ಮುಖ್ಯ ಮತ್ತು ಅದು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದರ ಅರಿವು ಇರಬೇಕಾಗುತ್ತದೆ. ಈಚೆಗಷ್ಟೇ ಸಾರಿಗೆ ಸಂಸ್ತೆಯ ಬಸ್ಸಿನಲ್ಲಿ ಇಬ್ಬರ ನಡುವೆ ನಡೆದ ಒಂದೇಒಂದು ಪದ ಬಳಕೆ ಎರಡೂ ರಾಜ್ಯಗಳ ನಡುವಿನ ಸಂಘರ್ಷಕ್ಕೆ ನಾಂದಿಯಾಯಿತು. ಸಮಾಜ ಇಷ್ಟೊಂದು ಸೂಕ್ಷ್ಮವಾದ ಈ ದಿನಗಳಲ್ಲಿ ಶರಣ ಬಗ್ಗೆ, ಸಮಾಜದ ಬಗ್ಗೆ ಸಂಶೋಧನಾತ್ಮಕವಾಗಿ ಬರೆಯುವದಕ್ಕೆ ಎದೆಗಾರಿಕೆ ಬೇಕಾಗುತ್ತದೆ. ಅಂಥ ಧೈರ್ಯವನ್ನೂ ಇಲ್ಲಿ ಬರಹಗಾರ ತೋರಿದ್ದಾರೆ’ ಎಂದರು.
‘ಎಲ್ಲಿಯವರೆಗೆ ಕನ್ನಡಿಗರು ಬಸವಣ್ಣನನ್ನು ಅಳವಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ನನ್ನಂಥವನು ಬಸವಣ್ಣನ ಬಗ್ಗೆ ಬರೆಯುತ್ತಲೇ ಇರಬೇಕಾಗುತ್ತದೆ’ ಎಂಬ ಮಾತನ್ನು ಲೇಖಕರೇ ಹೇಳಿಕೊಂಡಿದ್ದಾರೆ. ಶರಣ ಚಳವಳಿಯಾಗಿ ಇಷ್ಟು ಶತಮಾನಗಳು ಗತಿಸಿದರೂ ಸಮಾನತೆ ಎಂಬುದು ಏಕೆ ಅನುಷ್ಠಾನ ಆಗಲಲ್ಲ ಎಂಬ ಪ್ರಶ್ನೆಯನ್ನು ನಾವು ಮಾಡಿಕೊಳ್ಳಬೇಕಿದೆ. ಕಾರಣ ಇಷ್ಟೇ; ನಾವು ಶರಣರನ್ನು ಹೊಗಳುತ್ತ ಸಾಗಿದ್ದೇವೆ ಹೊರತು ಅಳವಡಿಸಿಕೊಂಡಿಲ್ಲ’ ಎಂದು ಹೇಳಿದರು.
‘ಬಸವಣ್ಣ ಬದುಕಿದ್ದಾಗಲೂ ಹಿಂಸೆ ನೀಡಲಾಯಿತು. ಬಸವಣ್ಣ ಸತ್ತ ಮೇಲೂ ಹಿಂಸೆ ನೀಡುತ್ತಲೇ ನಡೆದಿದ್ದೇವೆ. ಅವರ ತತ್ವಗಳನ್ನು ಅಳವಡಿಸಿಕೊಳ್ಳದೇ, ಹೊಗಳುತ್ತ ಸಾಗಿದ್ದೇವೆ. ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಬೇಡಿ ಎಂದು ಅವರು ಹೇಳಿದರು. ಹಾಗಾದರೆ ನಾವು ಅಳವಡಿಕೆ ಬಿಟ್ಟು ಹೊಗಳಿಕೆ ಮಾತ್ರ ಮುಂದುವರಿಸಿದ್ದೇವೆ. ಇದು ಹಿಂಸೆ ಅಲ್ಲದೆ ಮತ್ತೇನು’ ಎಂದೂ ಪ್ರತಿಪಾದಿಸಿದರು.
‘ಬಟ್ಟ ಬಯಲು’ ಎಂಬ ಕೃತಯನ್ನು ಸಾಹಿತಿ ಅಧ್ಯಾತ್ಮದ ಊದಿಗೊಳಿಯಲ್ಲೇ ಮತ್ತೂ ಊದದೇ ಪ್ರಾಯೋಗಿಕವಾಗಿಯೂ ಅವರು ಅರ್ಥೈಸಿದ್ದಾರೆ. ಬಯಲು ಎಂಬುದು 12ನೇ ಶತಮಾನದಲ್ಲಿ ಶರಣರು ಅರ್ಥ ಕೊಟ್ಟ ಪದ. ಅಲ್ಲಿಯವರೆಗೂ ಬಯಲು ಎಂದರೆ ಖಾಲಿ ಜಾಗ ಎಂಬ ಭೌತಿಕ ಅರ್ಥ ಮಾತ್ರ ಇತ್ತು. ಆದರೆ, ಶರಣರು ಪಾರಮಾರ್ಥಿಕ ಅರ್ಥ ಕಂಡುಹಿಡಿದರು. ಬಯಲೆಂಬುದು ಶೂನ್ಯ, ಎಲ್ಲವನ್ನೂ ಒಳಗೊಂಡಿದ್ದರೂ ಏನೂ ಇಲ್ಲದ ಶೂನ್ಯ ಎಂಬುದನನ್ನು ಕಂಡುಕೊಂಡರು. ಶೂನ್ಯ ಎಂಬುದೊಂದು ಪೂರ್ಣಾವಸ್ಥೆ. ಬಯಲಿನ ಬಗ್ಗೆ ಶಿವರಣರ ಪರಿಕಲ್ಪನೆ ಏನಿತ್ತು? ಅದರ ಪರಿಭಾಷೆ ಏನು ಎಂಬುದನ್ನು ಸಾಹಿತಿ ಪರಕಾಯ ಪ್ರವೇಶ ಮಾಡಿ ಹುಡುಕಲು ಹೋದಂತೆ ಭಾಸವಾಗುತ್ತದೆ’ ಎಂದೂ ಹೇಳಿದರು.
ಮಹಾಶಿವರಾತ್ರಿ ಕುರಿತು ಉಪನ್ಯಾಸ ನೀಡಿದ ಕೃತಿಕಾರ ಪ್ರೊ.ಸಿ. ಕೆ. ನಾವಲಗಿ ‘ಜನಪದರ ಪ್ರಕಾರ, ಬೇಡರ ಕಣ್ಣಪ್ಪನಿಂದ ಶಿವ ಆರಾಧನೆ ಆಚರಣೆಗೆ ಬಂತು. ಉತ್ತರಭಾರತದಲ್ಲಿ ಚಂದ್ರಸೇನ ರಾಜನ ಕಾಲದಲ್ಲಿ ಬಂದಿದೆ ಎನ್ನಲಾಗುತ್ತಿದೆ’ ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಕಾರಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ‘ವರ್ಷದಲ್ಲಿ ಒಮ್ಮೆ ಬರುವ ಮಹಾಶಿವರಾತ್ರಿ ಅತ್ಯಂತ ಪ್ರಮುಖ ರಾತ್ರಿ. ಶಿವಧ್ಯಾನದಲ್ಲೇ ಕಳೆದು, ಶಿವಸ್ಮರಣೆ ಮಾಡಿದರೆ ಆತ ಒಲಿಯುತ್ತಾನೆ. ಶಿವ ಭಕ್ತಿಗಲ್ಲದೇ ಮತ್ಯಾವುದಕ್ಕೂ ಒಲಿಯುವುದಿಲ್ಲ. ಅಂತರಂಗ, ಬಹಿರಂಗ ಶುದ್ಧಿಯಿಮದ ಶಿವನ ಸ್ಮರಿಸಿ’ ಎಂದು ಸಂದೇಶ ನೀಡಿದರು.
ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಜಗದೀಶ ವಸ್ತ್ರದ, ವಿಶ್ವನಾಥ ಬಿಕ್ಕಣ್ಣವರ, ಅಕ್ಷತಾ ಚೇತನ್ ದಳವಾಯಿ ವೇದಿಕೆ ಮೇಲಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಎಸ್.ಬಿ. ದಳವಾಯಿ ಅತಿಥಿಗಳ ಪರಿಚಯ ಮಾಡಿದರು. ಪ್ರಭಾವತಿ ಲದ್ದಿಮಠ ನಿರೂಪಿಸಿದರು. ಮಂಜುನಾಥ್ ಕಳಸನ್ನವರ್ ಸ್ವಾಗತಿಸಿದರು. ವಿದ್ಯಾ ಜವಳಿ ವಂದಿಸಿದರು.
ವೈಷ್ಣವಿ ಚನ್ನಂಗಿ, ಸಂಘವಿ ಶೆಟ್ಟಿ, ಸಂಕಲ್ಪ ನೃತ್ಯಾಲಯ ಹಾಗೂ ರಾಜಗುರು ಶಿಕ್ಷಣ ಸಂಸ್ಥೆಯ ಮಕ್ಕಳು ಹಾಡು, ನೃತ್ಯ ಪ್ರದರ್ಶಿಸಿದರು. ಈಶ್ವರ ಗಡಿಬಿಡಿ, ಪ್ರಲ್ಹಾದ ಶಿಗ್ಗಾಂವಿ ತಂಡದವರು ಗಾಯನ ಪ್ರಸ್ತುತ ಪಡಿಸಿದರು.