ಪಣಜಿ: ಅಭಿವೃದ್ಧಿ ಹೊಂದಿದ ಗೋವಾದ ಕನಸು ನನಸಾಗಬೇಕಾದರೆ ರಾಜ್ಯ ಸಚಿವ ಸಂಪುಟ ಬದಲಾವಣೆ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.

ಪಣಜಿಯಲ್ಲಿ ಸುದಸ್ಧಿಗಾರರೊಂದಿಗೆ ಮಾತನಾಡಿದ ಅವರು- ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ವಿಧಾನಸಭೆಯ ಮುಂಗಾರು ಅಧಿವೇಶನದ ನಂತರ ಮುಖ್ಯಮಂತ್ರಿ ಡಾ. ಸಾವಂತ್ ಸಂಪುಟ ಬದಲಾವಣೆಯ ಕುರಿತು ಮಾಹಿತಿ ನೀಡಿದ್ದರು. ಆದರೆ, 2047ರಲ್ಲಿ ಅಭಿವೃದ್ಧಿ ಹೊಂದಿದ ಗೋವಾದ ಕನಸನ್ನು ನನಸಾಗಿಸಲು ಸಚಿವ ಸಂಪುಟ ಪುನಾರಚನೆ ಮುಖ್ಯವಾಗಿದ್ದು, ಶೀಘ್ರವೇ ಆಗಲಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

ಮುಂಗಾರು ಅಧಿವೇಶನದಲ್ಲಿ ಸರ್ಕಾರದ ಕೆಲವು ಮಸೂದೆಗಳನ್ನು ಹಿಂಪಡೆಯಲಾಯಿತು. ಅದಕ್ಕೆ ನಿಖರ ಕಾರಣಗಳೇನು ಎಂಬ ಪ್ರಶ್ನೆಗೆ, ಕಾನೂನು ಮತ್ತು ನಗರ ಯೋಜನೆ ಎರಡು ಇಲಾಖೆಗಳ ನಡುವೆ ಸಾಮರಸ್ಯ ಇರಲಿಲ್ಲ. ಗೊಂದಲದಲ್ಲಿಯೇ ವಿಧೇಯಕ ಮಂಡನೆಯಾಗಿದೆ. ಜನರ ಭಾವನೆಯನ್ನು ಪರಿಗಣಿಸಿದ ನಂತರವೇ ಸರ್ಕಾರ ನಗರ ಯೋಜನೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕಾಯಿತು ಎಂದು ಮುಖ್ಯಮಂತ್ರಿ ವಿವರಿಸಿದರು.

ಸರ್ಕಾರದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದೆ. ಕೆಲವರು ತಾವು ಬಯಸಿದ ರೀತಿಯಲ್ಲಿ ನಡೆಯುತ್ತಿಲ್ಲ ಅಥವಾ ‘ಎಲ್ಲವೂ ಸರಿಯಾಗಿಲ್ಲ’ ಎಂದು ಭಾವಿಸುತ್ತಾರೆ. ಆದರೆ, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಮೂಲಸೌಕರ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ, ಪ್ರವಾಸೋದ್ಯಮ ಬೆಳವಣಿಗೆ ಇತ್ಯಾದಿಗಳಲ್ಲಿ ಗೋವಾ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿ ಶಾಸಕ ಮೈಕಲ್ ಲೋಬೋ ವಿರುದ್ಧ ಸಾವಂತ್ ವಾಗ್ದಾಳಿ ನಡೆಸಿದ್ದಾರೆ.