ಸುದ್ಧಿಕನ್ನಡ ವಾರ್ತೆ
Goa: ಇತರೆಡೆ ಹವ್ಯಕರ ಹಾಸ್ಟೇಲ್ ಗಳು ಇರುವಂತೆಯೇ ಗೋವಾದಲ್ಲಿ ಹವ್ಯಕರ ಹಾಸ್ಟೇಲ್ ಇಲ್ಲವೇ…..? ಗೋವಾದಲ್ಲಿ ಹವ್ಯಕರ ಪರಿಷತ್ ನಿಂದ ಈ ರೀತಿಯ ಯಾವುದಾದರೂ ವ್ಯವಸ್ಥೆ ಗೋವಾದಲ್ಲಿ ಇದೆಯೇ..? ಇದು ಇತ್ತೀಚೆಗೆ ಉತ್ತರಕನ್ನಡ ಮತ್ತು ಇತರ ಭಾಗಗಳಿಂದ ಗೋವಾಕ್ಕೆ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ಬರುವ ಹವ್ಯಕ ಹವ್ಯಕರು ಪ್ರಶ್ನೆ ಕೇಳುತ್ತಿದ್ದಾರೆ.

ಗೋವಾದಲ್ಲಿ ಇಂತಹ ಹಲವು ಸಮಸ್ಯೆಗಳು ಇತ್ತೀಚೆಗೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಗೋವಾ ವಿಶ್ವವಿದ್ಯಾಲಯದಲ್ಲಿ ಯಲ್ಲಾಪುರದ ಹವ್ಯಕ ವಿದ್ಯಾರ್ಥಿ ಉನ್ನತ ವ್ಯಾಸಂಗಕ್ಕಾಗಿ ಸೀಟ್ ಸಿಕ್ಕಿದೆ. ಆದರೆ ವಿಶ್ವವಿದ್ಯಾಲಯದ ಹಾಸ್ಟೇಲ್ ನಲ್ಲಿ ಈ ಹವ್ಯಕ ವಿದ್ಯಾರ್ಥಿಗೆ ಊಟದ ಸಮಸ್ಯೆ ಎದುರಾಗಿದೆ. ಗೋವಾದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಎರಡೂ ಸೇರಿಯೇ ಇರುವುದರಿಂದ ಈ ವಿದ್ಯಾರ್ಥಿ ಹೆಚ್ಚಿನ ತೊಂದರೆ ಎದುರಿಸುವಂತಾಗಿದೆ. ಈ ವಿದ್ಯಾರ್ಥಿಯ ಕುಟುಂಬ ಶ್ರೀಮಂತ ಕುಟುಂಬವಲ್ಲದ ಕಾರಣ ಪಣಜಿ ಭಾಗದಲ್ಲಿ ಪ್ಲ್ಯಾಟ್ ಗಳನ್ನು ಬಾಡಿಗೆ ಪಡೆಯುವಷ್ಟು ಶಕ್ತಿಯಿಲ್ಲ. ಇದರಿಂದಾಗಿ ಗೋವಾ ವಿಶ್ವವಿದ್ಯಾಲಯದಲ್ಲಿ ಸೀಟ್ ಸಿಕ್ಕಿಯೂ ಕೂಡ ವ್ಯಾಸಂಗಕ್ಕೆ ಅಡ್ಡಿಯುಂಟಾಗುವಂತಾಗಿದೆ.

ಇಂತಹದ್ದೇ ಘಟನೆ ಮರುಕಳಿಸುತ್ತಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಶಿರಸಿಯಿಂದ ಗೋವಾಕ್ಕೆ ಉದ್ಯೋಗ ಹುಡುಕಲು ಬರುತ್ತಿದ್ದ ಹವ್ಯಕ ವ್ಯಕ್ತಿಗೂ ಕೂಡ ಇದೇ ರೀತಿ ಸಮಸ್ಯೆ ಎದುರಾಗಿದೆ. ಗೋವಾಕ್ಕೆ ಬಂದರೆ ಹೋಟೆಲ್ ನಲ್ಲಿ ಭಾರಿ ದುಬಾರಿ ಬಾಡಿಗೆ ಹಣ ನೀಡಿ ಉಳಿಯುವಷ್ಟು ಶಕ್ತಿ ಇವರ ಬಳಿಯಿಲ್ಲ. ಇದರಿಂದಾಗಿ ಇವರೂ ಕೂಡ ಗೋವಾದಲ್ಲಿ ತಮ್ಮ ಪರಿಚಯಸ್ಥರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ಬ್ರಾಹ್ಮಣರ ಹಾಸ್ಟೇಲ್ ಅಥವಾ ಗೋವಾಕ್ಕೆ ಬಂದಾಗ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಸತಿಗಾಗಿ ಯಾವುದಾದರೂ ಮಠ ಅಥವಾ ದೇವಸ್ಥಾನಗಳಲ್ಲಿ ವ್ಯವಸ್ಥೆ ಇದೆಯೇ ಎಂದು ಕೂಡ ಇವರು ಎಲ್ಲೆಡೆ ವಿಚಾರಿಸಿ, ಅದು ಇಲ್ಲ ಎಂದಾಗ ಗೋವಾದ ಸುದ್ಧಿಯನ್ನೇ ಬಿಟ್ಟಿದ್ದಾರೆ.

ಈ ಎರಡೂ ಘಟನೆಗಳು ಇತ್ತೀಚೆಗೆ ಕೇವಲ ಒಂದೆರಡು ವಾರಗಳಲ್ಲಿ ನಡೆದ ಘಟನೆ. ಆದರೆ ಇಂತಹ ಅದೆಷ್ಟೋ ಸಮಸ್ಯೆಗಳನ್ನು ಬ್ರಾಹ್ಮಣರು ಎದುರಿಸುತ್ತಿದ್ದಾರೆ. ಗೋವಾದಲ್ಲಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಬ್ರಾಹ್ಮಣರಿಗೆ ಇದ್ದಕಿದ್ದಂತೆಯೇ ಎದ್ದು ಹೋಗಿ ಎಂದು ದೇವಸ್ಥಾನ ಸಮೀತಿಯವರು ಹೇಳಿದಾಗ ರಾತ್ರೋರಾತ್ರಿ ಬ್ರಾಹ್ಮಣರ ಕುಟಂಬ ಬೀದಿಗೆ ಬಂದ ಅದೆಷ್ಟೋ ಉದಾಹರಣೆಗಳಿವೆ.ಇಂತಹ ಸಂದರ್ಭದಲ್ಲಿ ಬ್ರಾಹ್ಮಣರಿಗೆ ವಸತಿಗೆ ಯಾವುದಾದರೂ ಮಠಮಾನ್ಯಗಳಲ್ಲಿ ಕಡಿಮೆ ದರದಲ್ಲಿ ವಸತಿ ವ್ಯವಸ್ಥೆ ಸಾಧ್ಯವಾದರೆ ಒಳಿತಲ್ಲವೇ…?

ಗೋವಾದಲ್ಲಿ ಈರೀತಿ ಬರುವ ಹವ್ಯಕರಿಗೆ ಉಚಿತ ವ್ಯವಸ್ಥೆ ನೀಡಲು ಸಾಧ್ಯವಿಲ್ಲವಾದರೂ ಇಂತಹ ವಿದ್ಯಾರ್ಥಿಗಳು ಅಥವಾ ಈ ರೀತಿ ಉದ್ಯೋಗ ಅರಸಿ ಬರುವವರಿಗೆ ಕಡಿಮೆ ಹಣದಲ್ಲಿ ವ್ಯವಸ್ಥೆಯಾಗುವಂತಾದರೆ ಒಳಿತು ಎಂಬುದು ಕರ್ನಾಟಕದಿಂದ ಗೋವಾಕ್ಕೆ ಬರುವ ಹವ್ಯಕರ ಅಭಿಪ್ರಾಯವಾಗಿದೆ. ಯಾವುದೇ ಮಠ ಮಾನ್ಯಗಳಿಂದ ಈ ರೀತಿಯ ವ್ಯವಸ್ಥೆ ಜಕಲ್ಪಿಸಲು ಸಾಧ್ಯವಾದರೆ ಒಳಿತಲ್ಲವೆ…? ವ್ಯವಸ್ಥೆ ಇರುವವರು ಯಾರಾದರೂ ಹವ್ಯಕರ ಪಿಜಿ ಅಥವಾ ಹಾಸ್ಟೇಲ್ ಕೂಡ ನಡೆಸಿದರೆ ಅದೆಷ್ಟೋ ಜನರಿಗೆ ಅನುಕೂಲವಾಗಲಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.