ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಮೂರನೇಯ ಜಿಲ್ಲೆಯ ಸ್ಥಾಪನೆಗೆ ಪರ್ವರಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹೊಸ ಜಿಲ್ಲೆಯ ಹೆಸರು”ಕುಶಾವತಿ” ಇದರ ಪ್ರಧಾನ ಕಛೇರಿ ಕೆಫೆಯಲ್ಲಿರಲಿದೆ. ಈ ಕುರಿತು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಂಗಳವಾರ ಪಣಜಿಯಲ್ಲಿ ಮಾಹಿತಿ ನೀಡಿದರು.
ಗೋವಾದ ಮೂರನೇಯ ಜಿಲ್ಲೆಯು ದಕ್ಷಿಣ ಗೋವಾದ ಧಾರಾಬಾಂದೋಡ, ಸಾಂಗೆ, ಕೆಫೆ, ಮತ್ತು ಕಾಣಕೋಣ ತಾಲೂಕುಗಳನ್ನು ಒಳಗೊಂಡಿರಲಿದೆ.

ಗೋವಾದಲ್ಲಿ ಮೂರನೇಯ ಜಿಲ್ಲೆ ಸ್ಥಾಪನೆಯ ಬಗ್ಗೆ ಸಂಪುಟ ಸಭೆ ಮತ್ತು ವಿಧಾನಸಭೆಯಲ್ಲಿ ಚರ್ಚಿಸಲಾಗಿದೆ. ನೀತಿ ಆಯೋಗದ ಶಿಫಾರಸ್ಸಿನ ಪ್ರಕಾರ ದೇಶದಲ್ಲಿ 120 ಹೊಸ ಸಣ್ಣ ಜಿಲ್ಲೆಗಳನ್ನು ಸ್ಥಾಪಿಸಲಾಗಿದೆ. ಗೋವಾದ ಮೂರನೇಯ ಜಿಲ್ಲೆ ಅವುಗಳಲ್ಲಿ ಒಂದಾಗಿದೆ. ಮೂರನೇಯ ಜಿಲ್ಲೆಯು ಹೆಚ್ಚುವರಿ ಹಣವನ್ನು ಪಡೆಯಲು ಮತ್ತು ಕೇಂದ್ರ ಯೋಜನೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನ ಪಡೆಯಲು ಸಾಧ್ಯವಾಗಿಸುತ್ತದೆ. ಜಿಲ್ಲಾ ಮಟ್ಟದ ಕೆಲಸಗಳಿಗಾಗಿ ಸ್ಥಳೀಯ ನಾಗರಿಕರು ಹೊಸ ಜಿಲ್ಲೆಯ ಸ್ಥಾಪನೆಯಿಂದ ಹೆಚ್ಚು ದೂರ ಪ್ರಯಾಣಿಸಬೇಕಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಮೂರನೇಯ ಜಿಲ್ಲೆ ಸ್ಥಾಪನೆಯ ಕುರಿತು ವಿರೋಧ ಪಕ್ಷ ಕಾಂಗ್ರೇಸ್ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಯೂರಿ ಅಲೆಮಾಂವ- ಈ ಕುರಿತು ಅಧ್ಯಯನ ಅಗತ್ಯವಿದೆ. ಅಧ್ಯಯನ ನಡೆಸದೆಯೇ ತರಾತುರಿಯಲ್ಲಿ ಮೂರನೇಯ ಜಿಲ್ಲೆ ರಚಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.