ಸುದ್ಧಿಕನ್ನಡ ವಾರ್ತೆ
ಮಹದಾಯಿ (Mahadayi) ನದಿ ನೀರಿಗೆ ಸಂಬಂಧಿಸಿದಂತೆ ಗೋವಾ ರಾಜ್ಯ ತನ್ನದೇ ಆದ ನಿಲುವನ್ನು ಮುಂದುವರೆಸಿಕೊಂಡು ಹೋಗಿರುವುದು ಕರ್ನಾಟಕದ ನೀರಿನ ಯೋಜನೆಗಳಿಗೆ ಸಂಕಷ್ಟ ತಂದೊಡ್ಡಿದೆ. ಇದೀಗ ಮಹದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಗೋವಾದ ಪರಿಸರ ಅಭ್ಯಾಸಕ ಕ್ಯಾಪ್ಟನ್ ನಿತೀನ್ ಧೋಂಡ ರವರು ಗೋವಾ ಮಾಧ್ಯಮಗಳಿಗೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.

ಮಹದಾಯಿ ನದಿ ನೀರನ್ನು ಕರ್ನಾಟಕ ತಿರುಗಿಸಿಕೊಂಡರೆ ಇದರ ಪರಿಣಾಮ ಕೇವಲ ಕರ್ನಾಟಕ ಅಥವಾ ಗೋವಾ ರಾಜ್ಯಕ್ಕೆ ಮಾತ್ರವಲ್ಲದೆಯೇ ಇಡೀ ಪಶ್ಚಿಮ ಘಟ್ಟದ (Western Ghats) ಮೇಲೆ ಉಂಟಾಗಲಿದೆ ಎಂದು ಕ್ಯಾಪ್ಟನ್ ನಿತೀನ್ ದೋಂಡ ಹೇಳಿಕೆ ನೀಡಿದ್ದಾರೆ. ಅವರು ಪೊಂಡಾದಲ್ಲಿ ಆಯೋಜಿಸಿದ್ದ ಮಹದಾಯಿ ಬಚಾವ್ ಆಂದೋಲನದಲ್ಲಿ ಮಾತನಾಡುತ್ತಿದ್ದರು.

ಮಹದಾಯಿ ನದಿ ನೀರನ್ನು ಕರ್ನಾಟಕ ತಿರುಗಿಸಿದರೆ ಅದರ ಪರಿಣಾಮ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳು ಎದುರಿಸಬೇಕಾಗುತ್ತದೆ. ಸಮುದ್ರಕ್ಕೆ ಹರಿಯುವ ಈ ಸಿಹಿ ನೀರನ್ನು ತಿರುಗಿಸಿದರೆ ಸಮುದ್ರದಲ್ಲಿ ಗಡಸು ನೀರಿನ ಪ್ರಮಾಣ ಹೆಚ್ಚಲಿದೆ. ಹಳ್ಳ ಕೊಳ್ಳಗಳ ನೀರು ಹಾಳಾಗಿ ಮೀನುಗಾರಿಕೆ ಸಂಕಷ್ಟಕ್ಕೆ ಸಿಲುಕಲಿದೆ. ಇದರಿಂದಾಗಿ ಗೋವಾ ಪ್ರವಾಸೋದ್ಯಮ, (Goa Tourism) ಪರಿಸರ, ಅರ್ಥವ್ಯವಸ್ಥೆ ಸಂಪೂರ್ಣ ಹಾಳಾಗಲಿದೆ ಎಂದು ಕ್ಯಾಪ್ಟನ್ ನಿತೀನ್ ದೋಂಡ ಅಭಿಪ್ರಾಯಪಟ್ಟಿದ್ದಾರೆ.

ಮಹದಾಯಿ ವಿಷಯವು ಕೇವಲ ರಾಜಕೀಯವಲ್ಲ. ದೊಡ್ಡ ವ್ಯವಸಾಯದ ಹಿತಸಂಬಂಧದ್ದಾಗಿದೆ, ಮಹದಾಯಿ ನದಿ ನೀರನ್ನು ಮಲಪ್ರಭೆಗೆ ತಿರುಗಿಸುವುದು ಕರ್ನಾಟಕದಲ್ಲಿ ಕಬ್ಬು ಉತ್ಪಾದನೆ ಮತ್ತು ಸಕ್ಕರೆ ಕಾರ್ಖಾನೆಗಳ ಹೆಚ್ಚುತ್ತಿರುವ ಬೇಡಿಕೆಯಾಗಿದೆ. ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಮಂಜೂರಿ ನೀಡಿದೆ. ಬೆಳಗಾವಿ ಮತ್ತು ಖಾನಾಪುರದಲ್ಲಿಯೂ ಇದರ ವಿರುದ್ಧವಾಗಿ ಆಂದೋಲನ ನಡೆದಿದೆ. ಗೋವಾದಲ್ಲಿಯೂ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನಿತೀನ್ ದೋಂಡ ಹೇಳಿದ್ದಾರೆ.

ಗೋವಾದ ಪರಿಸರ ತಜ್ಞ ಪ್ರಜಲ ಸಾಖರದಾಂಡೆ ಮಾತನಾಡಿ- ಕಳಸಾ ನಾಲೆಗೆ ನೀರನ್ನು ತಿರುಗಿಸುವ ಕಾರ್ಯ ಈ ಹಿಂದೆಯೇ ಪೂರ್ಣಗೊಂಡಿದೆ. ಇದೀಗ ಬಂಡೂ ನಾಲೆಯನ್ನು ಕೇಂದ್ರೀಕೃತ ಗೊಳಿಸಿ ಅಲ್ಲಿ ನೀರನ್ನು ತಿರುಗಿಸುವುದನ್ನು ತಡೆಯಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.